ಕೊರೊನಾ ರೂಪಾಂತರ ಒಮಿಕ್ರಾನ್ ಹುಟ್ಟು ದಕ್ಷಿಣ ಆಫ್ರಿಕಾದಲ್ಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಅನೇಕ ರಾಷ್ಟ್ರಗಳು ವಿಮಾನ ಹಾರಾಟ ರದ್ದುಗೊಳಿಸಿವೆ. ಈ ಮಧ್ಯೆ ಟೀಂ ಇಂಡಿಯಾ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ಯಾ, ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ದಕ್ಷಿಣ ಆಫ್ರಿಕಾ ಪ್ರವಾಸ ಪೂರ್ವನಿರ್ಧರಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದಿದ್ದಾರೆ. ಹೊಸ ರೂಪಾಂತರದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರವಾಸದ ಬಗ್ಗೆ ನಿರ್ಧರಿಸಲು ಇನ್ನೂ ಸಮಯವಿದೆ. ಮೊದಲ ಟೆಸ್ಟ್ ಡಿಸೆಂಬರ್ 17 ರಿಂದ ನಡೆಯಲಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆಂದು ಗಂಗೂಲಿ ಹೇಳಿದ್ದಾರೆ.
ಭಾರತ, ಡಿಸೆಂಬರ್ 3 ರಿಂದ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆಡಲಿದೆ. ನಂತರ ತಂಡ ಚಾರ್ಟರ್ಡ್ ವಿಮಾನದಲ್ಲಿ ಡಿಸೆಂಬರ್ 8 ಅಥವಾ 9 ರಂದು ಜೋಹಾನ್ಸ್ ಬರ್ಗ್ಗೆ ತೆರಳಲಿದೆ.
ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ಯಾವಾಗಲೂ ಬಿಸಿಸಿಐನ ಮೊದಲ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದು ಗಂಗೂಲಿ ಹೇಳಿದ್ದಾರೆ. ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಪ್ರವಾಸದಲ್ಲಿ ಭಾರತ 3 ಟೆಸ್ಟ್, 3 ಏಕದಿನ ಪಂದ್ಯ ಮತ್ತು 4 ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.