alex Certify ರೈತರಿಗೆ ಗುಡ್ ನ್ಯೂಸ್: ಇನ್ನು ಮುಂದೆ ‘ಭಾರತ್ ಬ್ರ್ಯಾಂಡ್’ಗಳಲ್ಲಿ ಸಬ್ಸಿಡಿಯಲ್ಲಿ ರಸಗೊಬ್ಬರ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಇನ್ನು ಮುಂದೆ ‘ಭಾರತ್ ಬ್ರ್ಯಾಂಡ್’ಗಳಲ್ಲಿ ಸಬ್ಸಿಡಿಯಲ್ಲಿ ರಸಗೊಬ್ಬರ ಲಭ್ಯ

 ಬಳ್ಳಾರಿ: ಈ ಹಿಂದೆ ದೊರೆಯುತ್ತಿದ್ದ ಖಾಸಗಿ ಕಂಪನಿಗಳ ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳು ಮುಂದೆ ಭಾರತ್ ಬ್ರ್ಯಾಂಡ್‍ಗಳಲ್ಲಿ ಎಲ್ಲಾ ಫರ್ಟಿಲೈಜರ್ ಅಂಗಡಿಗಳಲ್ಲಿ ದೊರೆಲಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಸೋಮವಾರದಂದು ನಗರದ ಕೆಸಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸೀಡ್ಸ್ ಮತ್ತು ಫರ್ಟಿಲೈಜರ್ಸ್‍ನ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರ ಆಶಯದಂತೆ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಆರಂಭಿಸಲಾಗಿದ್ದು, ರಾಜ್ಯದಲ್ಲಿ 43 ಕೇಂದ್ರಗಳು ಉದ್ಘಾಟನೆಗೊಳ್ಳಲಿವೆ ಎಂದು ಅವರು ಹೇಳಿದರು.

ಈ ಮುಂಚೆ ದೊರೆಯುತ್ತಿದ್ದ ಯುರಿಯಾ 1 ಚೀಲ ಗೊಬ್ಬರದ ಬೆಲೆಯು 1666 ರೂ. ಇದ್ದು, ಈಗ 266 ರೂ.ಗೆ ದೊರೆಯಲಿದೆ. ಇನ್ನುಳಿದ 1400 ರೂ.ಸಬ್ಸಿಡಿ ರೂಪದಲ್ಲಿ ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಅದರಂತೆಯೇ 1 ಚೀಲ ಗೊಬ್ಬರಕ್ಕೆ ಡಿಎಪಿ ಬೆಲೆ 3850 ರೂ.ಇದ್ದು, 1350 ರೂ.ನೀಡಿದರೆ ಇನ್ನುಳಿದ 2500 ರೂ.ಸಬ್ಸಿಡಿ ಸಿಗಲಿದೆ. ಎಂಒಪಿ ಬೆಲೆ 2459 ರೂ.ಇದ್ದು, 1700 ರೂ.ಗೆ ರೈತರಿಗೆ ವಿತರಿಸಲಾಗುತ್ತಿದ್ದು, ಇನ್ನುಳಿದ 759 ರೂ.ಗಳನ್ನು ಸಬ್ಸಿಡಿ ನೀಡಲಿದೆ. ಕಾಂಪ್ಲೆಕ್ಸ್ 1 ಚೀಲದ ಗೊಬ್ಬರದ ಬೆಲೆ 3204 ರೂ. ಇದ್ದು, ರೈತರಿಗೆ 1470 ರೂ.ಗೆ ನೀಡಲಿದ್ದು, 1734 ರೂ.ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಒದಗಿಸಲಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ 2020 ಲಕ್ಷ ಕೋಟಿ ರೂ. ಹಣವನ್ನು ರೈತರು ರಸಗೊಬ್ಬರವನ್ನು ಕೊಂಡುಕೊಳ್ಳಲು ಕೇಂದ್ರ ಸರ್ಕಾರವು ಸಬ್ಸಿಡಿ ರೂಪದಲ್ಲಿ ಹಣ ನೀಡಲಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ 50 ಲಕ್ಷ ರೈತರಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ವರ್ಷಕ್ಕೆ 6 ಸಾವಿರ ರೂ.3 ಕಂತುಗಳಲ್ಲಿ ಮತ್ತು ರಾಜ್ಯ ಸರ್ಕಾರವು 4 ಸಾವಿರ ರೂ.ಗಳನ್ನು 2 ಕಂತುಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಇನ್ನು ಮುಂದೆ ಒಂದೇ ಅಂಗಡಿಯಲ್ಲಿ ಎಲ್ಲಾ ತರಹದ ರಸಗೊಬ್ಬರಗಳು, ಔಷಧಿಗಳು, ಕೃಷಿ-ಪರಿಕರಗಳು ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳು, ಕೀಟ ನಾಶಕಗಳು ಸೇರಿದಂತೆ ಇನ್ನಿತರೆ ಎಲ್ಲಾ ವಸ್ತುಗಳನ್ನು ಸಕಾಲದಲ್ಲಿ ಸೂಕ್ತ ಬೆಲೆಗಳಲ್ಲಿ ಒದಗಿಸಿಕೊಡುವುದೇ ರಾಜ್ಯದ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಅದೇ ರೀತಿಯಾಗಿ ಕೇಂದ್ರದಲ್ಲಿ ಮಣ್ಣು, ಬೀಜ, ರಸಗೊಬ್ಬರ ವಿಶ್ಲೇಷಣೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ರೈತರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ, ವಿವಿಧ ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಬೇಸಾಯಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ ಹಾಗೂ ಇತರೆ ಸೇರಿದಂತೆ ಮಾಹಿತಿಯನ್ನು ರೈತರಿಗೆ ತಿಳಿಸುವುದೇ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ವೈ.ದೇವೆಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಕೃಷಿ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ದಯಾನಂದ್, ಫರ್ಟಿಲೈಜರ್ ಕಂಪನಿಯ ವ್ಯವಸ್ಥಾಪಕ ಸುರೇಶ್‍ಕುಮಾರ್, ಸಿಸಿಒ ಹರ್ಷದೀಪ, ಫರ್ಟಿಲೈಜರ್ ಕಮಿಟಿಯ ಸದಸ್ಯ ಕೃಷ್ಣಾರೆಡ್ಡಿ, ಶಿವ ರೆಡ್ಡಿ, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಗಣಪಾಲ ಐನಾತ ರೆಡ್ಡಿ ಮೊದಲಾದವರು ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...