ಬೆಂಗಳೂರು: ಯಾವುದೇ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಕೊಡುವುದನ್ನು ನಿಲ್ಲಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಧಾನಸಭೆಗಿಂದು ಸ್ಪಷ್ಪಪಡಿಸಿದ್ದಾರೆ.
ಶಾಸಕ ಹೆಚ್.ಡಿ. ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, 2018-19 ರಲ್ಲಿ ಕೇಂದ್ರ ಸರ್ಕಾರದ 200 ಕೋಟಿ ರೂ. ಹಾಗೂ 199 ಕೋಟಿ ರಾಜ್ಯ ಸರ್ಕಾರದ ಪಾಲು ಸಂಪೂರ್ಣ ಬಿಡುಗಡೆಯಾಗಿದೆ. 2019-20 ರಲ್ಲಿ 412.7 ಕೋಟಿ ರೂ., 2020-21 ರಲ್ಲಿ 393 ಕೋಟಿ ರೂ., 2021-22 ರಲ್ಲಿ 404 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಹೊಂಡಗಳನ್ನು ಮಿಷನ್ ಮೋಡ್ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, 2020 ರಿಂದ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಕೃಷಿ ಹೊಂಡಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ.. ದೇಶದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣಭೂಮಿ ಇರುವ ರಾಜ್ಯ ಕರ್ನಾಟಕ. ಈ ವರ್ಷ 640 ಕೋಟಿ ರೂ. ಅನುದಾನ ಬಂದಿದೆ ಎಂದರು.
ಕೃಷಿ ಇಲಾಖೆಯಲ್ಲಿ 9017 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ 4053 ಹುದ್ದೆ ಭರ್ತಿಯಾಗಿದೆ. 4954 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.