alex Certify ಬೆಳೆಹಾನಿಗೊಳಗಾದ ಎಲ್ಲಾ ರೈತರಿಗೆ ಪರಿಹಾರ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳೆಹಾನಿಗೊಳಗಾದ ಎಲ್ಲಾ ರೈತರಿಗೆ ಪರಿಹಾರ ವಿತರಣೆ

ದಾವಣಗೆರೆ: ರಾಜ್ಯಾದ್ಯಂತ ಬಿದ್ದ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯಲ್ಲಿ 2651 ಹೆಕ್ಟೇರ್ ಬೆಳೆ ನಾಶವಾಗಿದೆ, ಹಾನಿಗೊಳಗಾದ ಎಲ್ಲಾ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಹರಿಹರ ತಾಲ್ಲೂಕಿನ ನಂದಿತಾವರೆ ಬಳಿಯ ಭಾಸ್ಕರರಾವ್ ಕ್ಯಾಂಪಿನಲ್ಲಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 40 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಅಕಾಲಿಕ ಮಳೆಯಿಂದ ಪ್ರವಾಹ ಬಂದು ಎಲೆಬಳ್ಳಿ, ಅಡಿಕೆ, ಭತ್ತ ಬೆಳೆ ಹಾನಿಯಾಗಿದೆಯೋ, ಅಲ್ಲೆಲ್ಲಾ ಸಂಪೂರ್ಣ ಸರ್ವೆ ನಡೆಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಸಲ್ಲಿಸಿದ ಬಳಿಕ ತಕ್ಷಣ ಸರ್ಕಾರದಿಂದ ರೈತರಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಅಧಿಕಾರಿಗಳು ಕಛೇರಿಯಲ್ಲಿ ಕೂಡದೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಅಂದಾಜು ಮಾಡುವುದು ಹಾಗೂ ಅವರಿಗೆ ಸೂಕ್ತ ಬೆಳೆಹಾನಿ ಪರಿಹಾರ ನೀಡುವುದರತ್ತ ಗಮನ ಹರಿಸಬೇಕೆಂದರು.

ದಾವಣಗೆರೆ ಜಿಲ್ಲೆಯ ಮಲೆಬೇನ್ನೂರು, ಬಿಳಿಚೋಡು, ಚನ್ನಗಿರಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ, ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪರಿಹಾರ ಕೊಡಲಾಗುವುದು. ಕಳೆದ ಬಾರಿ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಮಾರ್ಗಸೂಚಿಗಿಂತ ಹೆಚ್ಚಿಗೆ ಪರಿಹಾರ ಹಣ ನೀಡಲಾಗಿದೆ, ಪ್ರಸ್ತುತ ವರ್ಷವೂ ಅಷ್ಟೇ ಪ್ರಮಾಣದಲ್ಲಿ ಪರಿಹಾರ ನೀಡಲಾಗುವುದು, 2021-22 ನೇ ಸಾಲಿನ ವಿಮಾ ಹಣ ಇನ್ನೊಂದು ವಾರದಲ್ಲಿ ರೈತರ ಕೈ ಸೇರಲಿದೆ ಎಂದರು.

ಭತ್ತದ ಬೆಳೆಗೆ ವಿಮಾ ಪರಿಹಾರ ವಿಷಯದಲ್ಲಿ ರೈತರಿಗೆ ಆತಂಕ ಬೇಡ, ಬಿರುಗಾಳಿಗೆ ಭತ್ತ ನೆಲಕ್ಕೆ ಬಿದ್ದಿರುವುದರಿಂದ ಅದು ಪ್ರಕೃತಿ ವಿಕೋಪ ಪರಿಹಾರದಡಿ ಬರುತ್ತದೆ, ಹಾಗಾಗಿ ಭತ್ತದ ಬೆಳೆಗೆ ಪರಿಹಾರ ಸಿಗಲಿದೆ ಎಂದರು.

ಈಗಾಗಲೇ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರಸಕ್ತ ವರ್ಷ ಈಗಷ್ಟೇ ಮುಂಗಾರು ಪ್ರಾರಂಭವಾಗಿದೆ, ದುರುದ್ದೇಶದಿಂದ ವ್ಯಾಪಾರಸ್ಥರು ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೋಸ್ಕರ ರಸಗೊಬ್ಬರ ಮತ್ತು ಬೀಜದ ಕೊರತೆಯಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಸಗೊಬ್ಬರ ಮತ್ತು ಬೀಜಕ್ಕೆ ಯಾವುದೇ ರೀತಿಯ ಕೊರತೆಯಿಲ್ಲ ಹಾಗಾಗಿ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಕೃತಕ ಗೊಬ್ಬರದ ಅಭಾವ ಉಂಟಾಗುವಂತೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿ, ಯಾವುದೇ ರೀತಿಯ ರಸಗೊಬ್ಬರ ಮತ್ತು ಬೀಜದ ಕೊರತೆಯಾಗದಂತೆ ನೋಡಿಕೊಂಡು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ರಷ್ಯಾ-ಉಕ್ರೇನ್ ಯುದ್ದ ನಡೆಯುತ್ತಿರುವ ಹಿನ್ನಲೆ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ, ಆದರೆ ಕೇಂದ್ರ ಸರ್ಕಾರ 2 ಲಕ್ಷದ 39 ಸಾವಿರ ಕೋಟಿ ರೂಪಾಯಿಯ ಸಹಾಯಧನವನ್ನು ರಸಗೊಬ್ಬರಗಳಿಗೆ ನೀಡುತ್ತಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀಲ ಡಿಎಪಿ ಬೆಲೆ 3851.ರೂ ಇದೆ ಅದನ್ನು ರೈತರಿಗೆ  2501.ರೂ ಸಹಾಯಧನ ನೀಡಿ 1361.ರೂಗೆ ಮಾರಾಟ ಮಾಡಲಾಗುತ್ತದೆ. ಯೂರಿಯಾ ಬೆಲೆ 1666.ರೂ ಇದೆ, ಅದಕ್ಕೆ 1400.ರೂ ಸಹಾಯಧನ ನೀಡಿ 266 ರೂಗೆ ಮಾರಾಟ ಮಾಡಲಾಗುತ್ತದೆ. ಕಾಂಪ್ಲೇಕ್ಸ್ ಬೆಲೆ 3204.ರೂ ಇದೆ ಇದಕ್ಕೆ 1734.ರೂಗಳ ಸಹಾಯಧನ ಒದಗಿಸಿ 1470.ರೂಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಹು ಬೆಳೆಗೆ ಆದ್ಯತೆ ನೀಡಿ:

ರೈತರು ವಿವಿಧ ಬೆಳೆ ಬೆಳೆಯುವ ಮೂಲಕ ಸಮತೋಲನ ಕಾಪಾಡಬೇಕು, ಯಾವುದಾದರೊಂದು ಬೆಳೆ ಬೆಲೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ, ಹಾಗಾಗಿ ಒಂದೇ ಬೆಳೆ ಬೆಳೆಯದೆ ಬಹು ಬೆಳೆಗಳನ್ನು ಬೆಳೆಯುವತ್ತ ರೈತರು ಗಮನ ಹರಿಸಬೇಕೆಂದರು.

ಈ ಸಂದರ್ಭದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮೊದಲಾದವರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...