ಶಿವಮೊಗ್ಗ: ರಾಜ್ಯದಲ್ಲಿ 5000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಹೊಸನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 5000 ಹೊಸ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ವಿಜ್ಞಾನ ಮತ್ತು ಗಣಿತ ಶಿಕ್ಷಕರ ನೇಮಕಾತಿಯಲ್ಲಿ ಕೊಂಚ ತಾಂತ್ರಿಕ ತೊಡಕು ಇದೆ. ಇದನ್ನು ಸರಿಪಡಿಸಿಕೊಂಡು ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ ನಿರ್ಮಿಸಲಾಗುವುದು. ಈ ಶಾಲೆಗೆ ಸಣ್ಣಪುಟ್ಟ ಶಾಲೆಗಳನ್ನು ವಿಲೀನ ಮಾಡುವ ಚಿಂತನೆ ಇದೆ ಎಂದು ಸಚಿವ ನಾಗೇಶ್ ತಿಳಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು. ಇದಕ್ಕಾಗಿ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ ಹೇಳಿದ್ದಾರೆ.