ಬೆಂಗಳೂರು: ಖಾಸಗಿ ಶಾಲೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘಟನೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.
ರುಪ್ಸಾ ಸಂಘಟನೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಲಕ್ಷಾಂತರ ರೂ. ಲಂಚ ಕೇಳಲಾಗುತ್ತಿದೆ ಎಂದು ಆರೋಪಿಸಿದೆ. ಆರ್.ಟಿ.ಇ. ಶುಲ್ಕ ಮರುಪಾವತಿಗೆ ಶೇಕಡ 30 ರಿಂದ 40 ರಷ್ಟು ಕಮಿಷನ್ ಕೊಡುವಂತೆ ಬೇಡಿಕೆ ಇಡುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಾಖಲೆ ನೀಡಿ ಆರೋಪ ಮಾಡಬೇಕು. ಈ ರೀತಿ ಬ್ಲಾಕ್ಮೇಲ್ ತಂತ್ರ ಅನುಸರಿಸಬಾರದು. ಯಾರೇ ದಾಖಲೆ ನೀಡಿದರೂ ಕ್ರಮ ಕೈಗೊಳ್ಳಲು ನಾವು ಸಿದ್ಧವಾಗಿದ್ದೇವೆ. ದಾಖಲೆ ಇದ್ದರೆ ನೀಡಲಿ ಇಲ್ಲವೇ ಮಾಧ್ಯಮಗಳ ಮೂಲಕವಾದರೂ ಬಿಡುಗಡೆ ಮಾಡಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.