ಬೆಂಗಳೂರು: ಕಡಿಮೆ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ. ಹೋಬಳಿಗೊಂದು ಮಾದರಿ ಶಾಲೆ ಆರಂಭಿಸಲಾಗುವುದು. ಶಾಲೆ ವಿಲೀನದ ಬಳಿಕ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 48,000 ಶಾಲೆಗಳಿದ್ದು, 13.800 ಶಾಲೆಗಳಲ್ಲಿ 25 ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 1,800 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಗಳು ಒಪ್ಪಿದರೆ ಅತ್ಯಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮಾದರಿ ಶಾಲೆಗೆ ಸೇರ್ಪಡೆ ಮಾಡಲಾಗುವುದು. ವಾಹನ ಸೌಲಭ್ಯ ಕಲ್ಪಿಸಲಾಗುವುದು. ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಅಗತ್ಯ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಶಾಲೆಗಳನ್ನು ವಿಲೀನಗೊಳಿಸಿದರೆ ಮಕ್ಕಳಿಲ್ಲದ ಶಾಲೆಗಳು ತಾನಾಗಿಯೇ ಮುಚ್ಚಿ ಹೋಗುತ್ತವೆ. ಸರ್ಕಾರಿ ಶಾಲೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.