ಮಂಗಳೂರು: ಪದವಿ ಪೂರ್ವ ತರಗತಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಅಳವಡಿಸಿಕೊಳ್ಳಲಿದ್ದು ಈ ವರ್ಷ ಡಿಸೆಂಬರ್ ವೇಳೆಗೆ ಪಠ್ಯದ ಕ್ರಮ ಅಂತಿಮಗೊಳಿಸಿ ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ -2020 ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ರಾಜ್ಯದಲ್ಲಿ ಪದವಿ ಪೂರ್ವ ತರಗತಿಗಳಲ್ಲಿ ಪಠ್ಯಕ್ರಮ ಅಳವಡಿಸಿಕೊಳ್ಳುವ ಕುರಿತು ಡಿಸೆಂಬರ್ ಒಳಗೆ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಎನ್ಇಪಿ ಶಿಕ್ಷಣ ವ್ಯವಸ್ಥೆ ಮರು ರೂಪಿಸುವಾಗ ಶಿಕ್ಷಕರ ನೇಮಕಾತಿಯಲ್ಲಿಯೂ ಬದಲಾವಣೆ ತರುವ ಅಗತ್ಯವಿದೆ. ತಕ್ಷಣವೇ ಯಾವುದೇ ಬದಲಾವಣೆ ಜಾರಿ ಮಾಡುವುದಿಲ್ಲ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.