ತುಮಕೂರು: ರಾಜ್ಯದಲ್ಲಿ ಸೋಮವಾರದಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿವೆ. ಒಂದನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸುವುದರ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ಹೇಳಿರುವಂತೆ ಸಂಭವನೀಯ ಕೊರೋನಾ ಮೂರನೇ ಅಲೆ ಮಕ್ಕಳಿಗೆ ತಗುಲುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, 1 ನೇ ತರಗತಿಯಿಂದಲೇ ಶಾಲೆ ಆರಂಭಿಸಬಹುದು ಎಂದು ಸಲಹೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದಲೇ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಚಿಕ್ಕ ಮಕ್ಕಳು ಮಾರ್ಗಸೂಚಿಗಳನ್ನು ಪಾಲಿಸುವುದು ಸ್ವಲ್ಪ ಕಷ್ಟವೇ. ಹಾಗಾಗಿ, ಸೋಮವಾರದಿಂದ 9 ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗುತ್ತದೆ. ಪರಿಸ್ಥಿತಿ ನೋಡಿಕೊಂಡು ತಜ್ಞರ ಸಲಹೆಯನ್ನು ಆಧರಿಸಿ ಒಂದನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆಗಸ್ಟ್ 30 ರಂದು ಮುಖ್ಯಮಂತ್ರಿಗಳು ತಜ್ಞರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶಾಲೆಗಳಲ್ಲಿ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಿದ್ದು, ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಹೇಳಿದ್ದು, ಆನ್ಲೈನ್ ಮತ್ತು ಆಫ್ ಲೈನಲ್ಲಿ ತರಗತಿ ನಡೆಯಲಿವೆ. ಹಾಜರಾತಿ ಕಡ್ಡಾವಲ್ಲ ಎಂದು ತಿಳಿಸಿದ್ದಾರೆ.