ಬೆಂಗಳೂರು: ಒಂದೇ ಆವರಣದಲ್ಲಿ ಒಂದೇ ಮಾಧ್ಯಮದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ರಾಜ್ಯದ ಯಾವುದೇ ಭಾಗದಲ್ಲಿ ನಡೆಯುತ್ತಿದ್ದರೂ ಅಂತಹ ಶಾಲೆಗಳನ್ನು ಒಂದೇ ಶಾಲೆಯನ್ನಾಗಿ ವಿಲೀನಗೊಳಿಸಲಾಗುವುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರು, ಒಂದೇ ಆವರಣದಲ್ಲಿ ಒಂದೇ ಮಾಧ್ಯದ ಎರಡು ಅಥವಾ ಹೆಚ್ಚಿನ ಶಾಲೆಗಳು ನಡೆಯುತ್ತಿದ್ದರೆ ಅವುಗಳನ್ನು ಗುರುತಿಸಿ ಒಂದೇ ಶಾಲೆಯಾಗಿ ಮಾರ್ಪಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಹಲವು ಕಡೆಗಳಲ್ಲಿ ಒಂದೇ ಆವರಣದಲ್ಲಿ ಒಂದೇ ಮಾಧ್ಯಮದ ಎರಡಕ್ಕಿಂತ ಹೆಚ್ಚು ಶಾಲೆಗಳು ನಡೆಯುತ್ತಿವೆ. ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಗುಣಾತ್ಮಕ ಶಿಕ್ಷಣ ನೀಡಲು ಪೂರಕ ವಾತಾವರಣ ಇರುವುದಿಲ್ಲ. ಹೀಗಾಗಿ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಒಂದೇ ಆವರಣದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶಾಲೆಗಳು ನಡೆಯುತ್ತಿರುವ ಪ್ರಕರಣಗಳನ್ನು ಗುರುತಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಒಂದೇ ಶಾಲೆಯಾಗಿ ನಡೆಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಈ ಶಾಲೆಗಳಿಗೆ ಇರುವ ಪ್ರತ್ಯೇಕ ಕೋಡ್ ಗಳಿಗೆ ಬದಲಾಗಿ ಒಂದೇ ಯು ಡೈಸ್ ಕೋಡ್ ಗಳನ್ನು ನೀಡಲು ಕ್ರಮ ಕೈಗೊಂಡು ವರದಿಯನ್ನು ಕಡತದ ಮೂಲಕ ಸಲ್ಲಿಸುವಂತೆ ಸೂಚಿಸಿದ್ದಾರೆ.