ಬೆಂಗಳೂರು: ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಿದ್ಧತೆ ಆರಂಭಿಸಿದೆ.
ಮಾರ್ಚ್ 9 ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆಗಳು ನಡೆಯಲಿದ್ದು,, ಪ್ರತಿ ಪರೀಕ್ಷಾ ಕೊಠಡಿಗೆ ಗೋಡೆ ಗಡಿಯಾರ ಅಳವಡಿಸಲಾಗುತ್ತದೆ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರನ್ನು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆಯಲು ಸೂಚಿಸಲಾಗಿದೆ. ನಕಲು ಮಾಡಿದ್ದ ಪರೀಕ್ಷಾ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲು ಸೈಬರ್ ಕ್ರೈಂ ಅಧಿಕಾರಿಗಳು, ಸ್ಥಳೀಯ ಪೊಲೀಸರು, ಶಿಕ್ಷಣ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗುವುದು ಎಂದರು.
ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಒದಗಿಸಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್ ಫೋನ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳ ನಿಷೇಧಿಸಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕರ್ತವ್ಯ ಮತ್ತು ಭದ್ರತೆಗೆ ತೊಡಗಿಸಿಕೊಂಡ ಸಿಬ್ಬಂದಿ ಮತ್ತು ಅಧಿಕಾರಿಗಳು ಮೊಬೈಲ್ ಫೋನ್ ಬಳಸುವಂತಿಲ್ಲ. ಮೇಲ್ವಿಚಾರಕರು ಕ್ಯಾಮರಾ ಇಲ್ಲದ ಮೊಬೈಲ್ ಫೋನ್ ಬಳಸಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.