ಕಲಬುರಗಿ: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಹುದ್ದೆಗಳು ಭರ್ತಿಯಾಗದಿದ್ದರೆ ಡಿಸೆಂಬರ್ ಒಳಗೆ ಮತ್ತೊಮ್ಮೆ ಸಿಇಟಿ ನಡೆಸುವ ಮೂಲಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಶಿಕ್ಷಕರಿಗೆ 40 ವಿದ್ಯಾರ್ಥಿಗಳಿದ್ದು, ಮತ್ತೆ 5000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೆಲವೆಡೆ ಅತಿಥಿ ಶಿಕ್ಷಕರು ಕೂಡ ಸಿಗುತ್ತಿಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 7,500 ರೂ.ನಿಂದ 10,000 ರೂ., ಪ್ರೌಢಶಾಲೆ ಶಿಕ್ಷಕರ ಗೌರವ ಸಂಭಾವನೆಯನ್ನು 8000 ರೂ.ನಿಂದ 10,500 ರೂ.ಗೆ ಏರಿಕೆ ಮಾಡಲಾಗಿದೆ ಎಂದರು.