ಢಾಕಾ :ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಕೊಳಕ್ಕೆ ಬಿದ್ದು 17 ಜನರು ಸಾವನ್ನಪ್ಪಿದ್ದಾರೆ. 35 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಭೀಕರ ಅಪಘಾತವು ಝಲ್ಕಾತಿ ಜಿಲ್ಲೆಯಲ್ಲಿ ಸಂಭವಿಸಿದೆ. ಮಾಹಿತಿಯ ಪ್ರಕಾರ, ಈ ಬಸ್ ಭಂಡಾರಿಯಾ ಉಪ ಜಿಲ್ಲೆಯಿಂದ 60 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ನೈಋತ್ಯ ವಿಭಾಗೀಯ ಪ್ರಧಾನ ಕಚೇರಿ ಬರಿಸಾಲ್ಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಕೊಳಕ್ಕೆ ಬಿದ್ದ ಪರಿಣಾಮ 17 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಮಾಹಿತಿಯ ಮೇರೆಗೆ ಆಗಮಿಸಿದ ಡೈವರ್ಗಳು ಬಸ್ನಿಂದ 17 ಶವಗಳನ್ನು ಹೊರತೆಗೆದಿದ್ದಾರೆ. ಕ್ರೇನ್ ಮೂಲಕ ಕೊಳದ ಉಳಿದ ಭಾಗಗಳಿಂದ ಬಸ್ ಅನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. ಮೃತರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೌತಮ್ ಕುಮಾರ್ ಘೋಷ್ ತಿಳಿಸಿದ್ದಾರೆ. ಬಸ್ ಒಳಗೆ ಹೆಚ್ಚಿನ ಶವಗಳು ಸಿಕ್ಕಿಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಗಾಯಗೊಂಡ 35 ಪ್ರಯಾಣಿಕರನ್ನು ಝಲ್ಕಾತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿ 65 ಪ್ರಯಾಣಿಕರಿದ್ದರು.