ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 243 ವಾರ್ಡ್ ಗಳ ಸಂಖ್ಯೆಯನ್ನು 225ಕ್ಕೆ ಇಳಿಸಿದೆ.
2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ವಾರ್ಡ್ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದಿನ ಅಧಿಸೂಚನೆ ತಕ್ಷಣ ಹಿಂಪಡೆದಿದೆ. ಅಲ್ಲದೇ ವಾರ್ಡ್ ಸಂಖ್ಯೆಯನ್ನು 225ಕ್ಕೆ ಇಳಿಸಿದೆ.
ಸರ್ಕಾರದ ಆದೇಶದ ಪ್ರಕಾರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದ ಸಮಿತಿ 2011ರ ಜನಗಣತಿ ಪ್ರಕಾರ ವಾರ್ಡ್ ವಿಂಗಡಣೆಯ ಹೊಸ ಪ್ರಕ್ರಿಯೆ ಪ್ರಾರಂಭಿಸಲಿದೆ. 243 ವಾರ್ಡ್ ಗೆ ಸುಮರು 36 ಸಾವಿರ ಜನಸಂಖ್ಯೆಯ ಆಸುಪಾಸಿನಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿತ್ತು. ಈಗ ವಾರ್ಡ್ ಸಂಖ್ಯೆ ಕಡಿಮೆಯಾಗಿರುವುದರಿಂದ ಜನಸಂಖ್ಯೆ ಪ್ರಮಾಣ ಹೆಚ್ಚಲಿದೆ.
ವಾರ್ಡ್ ನಕ್ಷೆ ಮತ್ತು ಗಡಿ ನಿಗದಿಪಡಿಸಿದ ವರದಿಯನ್ನು ರಾಜ್ಯಪತ್ರ ಹೊರಡಿಸುವ ಮೂಲಕ ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ ಕೋರಲಾಗುತ್ತದೆ. ಆಕ್ಷೇಪಣೆ ಇದ್ದರೆ 10 ದಿನಗಳ ಒಳಗಾಗಿ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ.