ಬೆಂಗಳೂರು: ಬಿಬಿಎಂಪಿಯಲ್ಲಿ ಮಾರ್ಷಲ್ ಹುದ್ದೆ ಕೊಡಿಸುವುದಾಗಿ ನಂಬಿಸಿ 200 ಯುವಕರಿಂದ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹರ್ಷ ಹಾಗೂ ಅರುಂಧತಿ ಎಂಬುವವರು ಬಿಬಿಎಂಪಿಯಲ್ಲಿ ಮಾರ್ಷಲ್ ಹುದ್ದೆ ಕೊಡಿಸುವುದಾಗಿ ಕೆಲಸದ ಅಮಿಷವೊಡ್ಡಿ ಹಣ ಪಡೆದು ವಂಚಿಸಿದ್ದಾಗಿ ಹೊಸಕೋಟೆ ನಿವಾಸಿ ಬಿ.ಕಾಂ ವಿದ್ಯಾರ್ಥಿಯೊಬ್ಬರು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹರ್ಷ ಹಾಗೂ ಅರುಂಧತಿ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಆರೋಪಿ ಹರ್ಷ ದೂರುದಾರ ವಿದ್ಯಾರ್ಥಿಗೆ 3 ಸಾವಿರ ನೀಡಿದರೆ ಮಾರ್ಷಲ್ ಹುದ್ದೆ ಕೊಡಿಸುವುದಾಗಿ ಹೇಳಿದ್ದ. ಅದರಂತೆ ಯುವಕ ಹಣ ನೀಡಿದ್ದ. ಅಲ್ಲದೇ ಬೇರೆ ಯಾರಿಗಾದರೂ ಕೆಲಸ ಬೇಕಿದ್ದರೆ ಹೇಳುವಂತೆಯೂ ತಿಳಿಸಿದ್ದ. ಅದರಂತೆ ಯುವಕ ತನ್ನ ಸ್ನೇಹಿತರಿಗೂ ಹೇಳಿದ್ದ.
ಯುವಕನಿಂದ ಮಾಹಿತಿ ಪಡೆದು 53 ಯುವಕರು ಆರೋಪಿಗೆ ಒಟ್ಟು 1.53 ಲಕ್ಷ ಹಣ ನೀಡಿದ್ದಾರೆ. ಅಲ್ಲದೇ ದಾಖಲಾತಿ ಪತ್ರಗಳನ್ನು ನೀಡಿದ್ದರು. ಇನ್ನೇನು ಕೆಲಸ ಸಿಕ್ಕಿತು ಎಂದು ಬಿಬಿಎಂಪಿ ಕಚೇರಿಗೆ ಆದೇಶ ಪತ್ರ ಹಿಡಿದು ಹೋದಾಗ ನಕಲಿ ಆದೇಶ ಪತ್ರ ಎಂಬುದು ಗೊತ್ತಾಗಿದೆ. ಹರ್ಷ ಹಾಗೂ ಅರುಂಧತಿ ಇದೇ ರೀತಿ ಬರೋಬ್ಬರಿ 200 ಯುವಕರಿಗೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.