ಬೆಂಗಳೂರು : ಗುತ್ತಿಗೆದಾರರ ಹೋರಾಟಕ್ಕೆ ಬಿಬಿಎಂಪಿ ( ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ) ಮಣಿದಿದ್ದು, ಮೊದಲ ಹಂತದಲ್ಲಿ 42 ಕೋಟಿ ಹಣ ಬಿಡುಗಡೆ ಮಾಡಿದೆ.
ಹೌದು. 25 ಲಕ್ಷದೊಳಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಬಾಕಿ ಹಣವನ್ನು ಬಿಬಿಎಂಪಿ ಬಿಡುಗಡೆ ಮಾಡುವ ಮೂಲಕ ಗುತ್ತಿಗೆದಾರರಿಗೆ ರಿಲೀಫ್ ನೀಡಿದೆ. ಮೊದಲ ಹಂತದಲ್ಲಿ 42 ಕೋಟಿ ಹಣ ಬಿಡುಗಡೆ ಮಾಡಿದೆ.
ಈ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಸಣ್ಣ ಗುತ್ತಿಗೆದಾರರಿಗೆ ಬಿಲ್ ಕ್ಲಿಯರ್ಗೆ ಮೊದಲ ಹಂತದ ಹಣ ಬಿಡುಗಡೆ ಮಾಡಲಾಗಿದ್ದು, ತನಿಖಾ ವರದಿ ಬಂದ ಬಳಿಕ ಉಳಿದ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಾಕಿ ಬಿಲ್ ಪಾವತಿ ಮಾಡದಿದ್ದರೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದರು. ಬಿಲ್ ಪಾವತಿ ಮಾಡದಿದ್ದರೆ ಕೆಲಸ ನಿಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಎಚ್ಚರಿಕೆ ನೀಡಿದ್ದರು.25,000 ಕೋಟಿಗೂ ಅಧಿಕ ಬಾಕಿ ಹಣವನ್ನು ಸರ್ಕಾರ ಉಳಿಸಿಕೊಂಡಿದೆ. 7 ಕ್ಕೂ ಹೆಚ್ಚು ಇಲಾಖೆಗಳಿಂದ ಸಾವಿರಾರು ಕೋಟಿ ರೂಪಾಯಿ ಬಾಕಿಯಿದೆ. ಆಗಸ್ಟ್ 31ರೊಳಗೆ ಸರ್ಕಾರ ಬಾಕಿ ಬಿಲ್ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಕಾಮಗಾರಿ ಸ್ಥಗಿತ ಮಾಡಬೇಕಾದ ಸ್ಥಿತಿ ಬರುತ್ತದೆ. ಆಗಸ್ಟ್ 31ರೊಳಗೆ ಬಿಲ್ ಕ್ಲೀಯರ್ ಮಾಡದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಹಣ ಬಿಡುಗಡೆ ಮಾಡಿದೆ.