ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 225 ವಾರ್ಡ್ ಗಳ ಮರು ವಿಂಗಡಣೆಗೆ ರಾಜ್ಯ ಸರ್ಕಾರದಿಂದ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.
12 ವಾರ್ಡ್ ಗಳ ಹೆಸರು ಬದಲಾವಣೆ ಮಾಡಲಾಗಿದ್ದು, ಕೆಲವು ವಾರ್ಡ್ ಗಡಿಯಲ್ಲಿ ಕೊಂಚ ಮಾರ್ಪಾಡು ಮಾಡಲಾಗಿದೆ. ಆಕ್ಷೇಪಣೆಗಳನ್ನು ಆಧರಿಸಿ ಅಂತಿಮ ಪಟ್ಟಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 243 ವಾರ್ಡ್ ಗಳನ್ನು ರಚಿಸಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಹಾಲಿ ರಾಜ್ಯ ಸರ್ಕಾರ 225 ವಾರ್ಡ್ ಗಳಿಗೆ ಇಳಿಸಿದೆ. ಆ. 18ರಂದು ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆಗೆ ಸಲ್ಲಿಕೆಯಾದ ಆಕ್ಷೇಪಣೆ ಆಧರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಲಿದೆ.
ಸದ್ಯ ಪ್ರಕಟ್ರಿಸಲಾದ 225 ವಾರ್ಡ್ ಅಂತಿಮ ಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, 12 ವಾರ್ಡ್ ಗಳ ಹೆಸರು ಬದಲಾಯಿಸಿದ್ದು, ಕೆಲವು ವಾರ್ಡ್ ಗಳ ಗಡಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿರುವುದರಿಂದ ಈ ವರ್ಷಾಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಸಾಧ್ಯತೆ ಇದೆ. ಹೈಕೋರ್ಟ್ ಅನುಮತಿ ನೀಡಿದಲ್ಲಿ ಮೀಸಲಾತಿಯನ್ನು ಪ್ರಕಟಿಸಲು ಸರ್ಕಾರ ರೆಡಿಯಾಗಿದೆ. ನಂತರ ಚುನಾವಣೆ ಆಯೋಗ ಬಿಬಿಎಂಪಿ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ.