ಬೆಂಗಳೂರು: ಬಿಬಿಎಂಪಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಬುಧವಾರ ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸಿ ಸಾರ್ವಜನಿಕರ ಸಮಸ್ಯೆ ಪರಿಹರಿಸಬೇಕೆಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್ ಆದೇಶಿಸಿದ್ದಾರೆ.
ಕಂದಾಯ ವಿಭಾಗದ ಅಧಿಕಾರಿಗಳು ಅವರವರ ಕಚೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಡ್ಡಾಯವಾಗಿ ಹಾಜರಿದ್ದು, ಕಂದಾಯ ಮತ್ತು ಕೊಂದು ಕೊರತೆಗಳ ಅದಾಲತ್ ನಡೆಸಬೇಕು. ಈ ಅಧಿಕಾರಿಗಳನ್ನು ಯಾವುದೇ ಭೌತಿಕ ಸಭೆಗೆ ಅಥವಾ ಸಾಮಾನ್ಯ ಸಭೆಗೆ, ವರ್ಚುಯಲ್ ಸಭೆಗೆ ಕರೆಯಬಾರದು. ಈ ವೇಳೆಯಲ್ಲಿ ಕಚೇರಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಖಾತ್ರಿಪಡಿಸಿಕೊಳ್ಳುವುದು. ಸಾರ್ವಜನಿಕರಿಂದ ಸ್ವೀಕರಿಸಿದ ಎಲ್ಲಾ ಕುಂದು ಕೊರತೆಗಳನ್ನು ಮತ್ತು ಮನವಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ವಲಯ ಆಯುಕ್ತರು ಮತ್ತು ವಲಯ ಜಂಟಿ ಆಯುಕ್ತರು ಇದನ್ನು ಕಾರ್ಯಗತಗೊಳಿಸಲು ಸಂಪೂರ್ಣ ಜವಾಬ್ದಾರಿ ವಹಿಸುವುದು ಎಂದು ತಿಳಿಸಲಾಗಿದೆ.