ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಳಿಕ ಇದೀಗ ಬಿಬಿಎಂಪಿಯಲ್ಲಿಯೂ ಬಹುಕೋಟಿ ಅಕ್ರಮ ನಡೆದಿರುವುದು ಬಯಲಾಗಿದೆ. ಅಸ್ತಿತ್ವದಲ್ಲಿಯೇ ಇಲ್ಲದ ಸೊಸೈಟಿ, ಸಹಕಾರಿ ಸಂಘ-ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ.
ಕೊರೊನಾ ಸಂದರ್ಭದಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದ್ದು, ಬಿಬಿಎಂಪಿ ಪಶ್ಚಿಮ ವಲಯದ 9 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯಿಂದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಿದ್ದಾರೆ. ಅಲ್ಲದೇ ಲೋಕಾಯುಕ್ತ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಪಾಲಿಕೆಯ ವಿಶೇಷ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ 102 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಧಿಕಾರಿಗಳಾದ ಸುಬೇಶ್, ಎಸ್.ಎಸ್.ದೇವಕಿ, ಬಿ.ಗಾಯತ್ರಿ, ಜಿ.ಎನ್.ಸುಬ್ಬರಾಮಯ್ಯ, ಎಸ್.ವಿ.ಗಿರಿಯಪ್ಪ, ಎನ್.ಗೀತಾ, ಕುಸುಮಾ, ಲಿಂಗಣ್ಣ ಗುಂಡಳ್ಳಿ ಹಾಗೂ ಸತ್ಯಮೂರ್ತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ದೂರು ದಾಖಲಾಗಿದೆ.