ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಪೌರಕಾರ್ಮಿಕರ ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕರಡು ಪಟ್ಟಿ ಸಿದ್ಧಪಡಿಸಿದ್ದು, ಬುಧವಾರ ಪ್ರಕಟಿಸಲಾಗುವುದು ಎಂದು ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ನೇರ ಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 3673, ಎರಡನೇ ಹಂತದಲ್ಲಿ 11,307 ಸೇರಿ 14,980 ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಿದೆ.
ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, 15,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ದೀರ್ಘಾವಧಿ ಸೇವೆ, ರೋಸ್ಟರ್ ಪದ್ಧತಿ, ವಿವಿಧ ಮಾನದಂಡಗಳ ಆಧಾರದ ಮೇಲೆ ಪರಿಶೀಲನೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು 14,980 ಹುದ್ದೆಗಳಿಗೆ 12,692 ಪೌರಕಾರ್ಮಿಕರನ್ನು ಅಂತಿಮಗೊಳಿಸಲಾಗಿದೆ.
ಅಕ್ಟೋಬರ್ 9ರಂದು ಕರಡು ಆಯ್ಕೆ ಪಟ್ಟಿಯನ್ನು ಪಾಲಿಕೆಯ https://bbmp.gov.in ವೆಬ್ಸೈಟ್ ಅಲ್ಲಿ ಪ್ರಕಟಿಸಲಾಗುವುದು. ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ಘನ ತ್ಯಾಜ್ಯ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರದ ಕಚೇರಿಯಲ್ಲಿಯೂ ಪ್ರಕಟಿಸಲಾಗುವುದು.
ತಾತ್ಕಾಲಿಕ ಆಯ್ಕೆ ಪಟ್ಟಿ ಪರಿಶೀಲಿಸಿ ಅಕ್ಟೋಬರ್ 21ರ ಸಂಜೆ 5.30 ರೊಳಗೆ ಸಂಬಂಧಿಸಿದ ಜಂಟಿ ಆಯುಕ್ತರ ಕಚೇರಿ, ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗಳಿಗೆ ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾದವರು ಯಾವುದೇ ಆಸೆ ಆಮಿಷಗಳಿಗೆ ಮಧ್ಯವರ್ತಿಗಳ ಮಾತನ್ನು ಕೇಳಿ ವಂಚನೆಗೆ ಒಳಗಾಗಬಾರದು ಎಂದು ಹೇಳಲಾಗಿದೆ.