ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಮೈದಾನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಆಸ್ತಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಲಾಗಿದೆ.
ಮೈದಾನವನ್ನು ತಮ್ಮ ಹೆಸರಿಗೆ ಖಾತಾ ಇಂಡೀಕರಣಕ್ಕೆ ಬಿಬಿಎಂಪಿಗೆ ವಕ್ಫ್ ಬೋರ್ಡ್ ನಿಂದ ಅರ್ಜಿ ಸಲ್ಲಿಸಲಾಗಿತ್ತು. ವಕ್ಫ್ ಬೋರ್ಡ್ ಅರ್ಜಿಯನ್ನು ಬಿಬಿಎಂಪಿ ವಜಾಗೊಳಿಸಿದೆ. ಚಾಮರಾಜಪೇಟೆ ಮೈದಾನ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಆಸ್ತಿ ಎಂದು ಆದೇಶ ಹೊರಡಿಸಿದೆ.
ಮೈದಾನದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳಿಂದ ಹೋರಾಟ ನಡೆಸಲಾಗಿತ್ತು. ಈಗ ಚಾಮರಾಜಪೇಟೆ ಜನರ 60 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ಈ ಕುರಿತಾಗಿ ಆದೇಶ ಹೊರಡಿಸಿದ್ದಾರೆ. ಜಂಟಿ ಆಯುಕ್ತರಾದ ಜೆ.ಸಿ.ಶ್ರೀನಿವಾಸ್ ಐತಿಹಾಸಿಕ ಆದೇಶ ಪ್ರಕಟಿಸಿದ್ದಾರೆ. ಚಾಮರಾಜಪೇಟೆ ಮೈದಾನ ನಮ್ಮದು ಎಂದು ವಕ್ಫ್ ಬೋರ್ಡ್ ಹೇಳಿದ್ದು, ಇದಕ್ಕೆ ದಾಖಲೆ ಕೇಳಿ ನೋಟಿಸ್ ನೀಡಲಾಗಿತ್ತು.
ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಅವರು ದಾಖಲೆ ಕೇಳಿ ನೋಟಿಸ್ ನೀಡಿದ್ದರು. ಎರಡು ತಿಂಗಳು ಕಾಲಾವಕಾಶ ನೀಡಿದ್ದರು. ಆದರೂ ಸೂಕ್ತ ದಾಖಲೆ ಸಲ್ಲಿಸಿರಲಿಲ್ಲ. ನಂತರ ಕೆಲವು ಮುಸ್ಲಿಂ ವಕೀಲರು 15 ದಿನ ಕಾಲಾವಕಾಶ ಪಡೆದುಕೊಂಡಿದ್ದರು. ಆದರೂ ದಾಖಲೆ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ಬಿಬಿಎಂಪಿ ಆದೇಶ ಹೊರಡಿಸಿದೆ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದೆ ಎಂದು ಆದೇಶ ಹೊರಡಿಸಿದೆ.