ಬೆಂಗಳೂರು: 2024-25ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಹಲವಾರು ಮಹತ್ವದ ಘೋಷಣೆ ಮಾಡಲಾಗಿದೆ.
ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲ್ಕೆರಿ ಟೌನ್ ಹಾಲ್ ನಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದರು. ಬೆಂಗಳೂರಿನ 100 ಕಡೆಗಳಲ್ಲಿ ಮಹಿಳೆಯರಿಗಾಗಿ ಶಿ ಟಾಯ್ಲೆಟ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದರು.
ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂಪಾಯಿ, ಪೌರಕಾರ್ಮಿಕರಿಗೆ ಶರಣೆ ಸತ್ಯಕ್ಕ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿ ಜೊತೆ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದರು.
11,307 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಹಸಿರು ರಕ್ಷಕ ಆಪ್, ರಸ್ತೆಬದಿ, ಪಾರ್ಕ್, ಕೆರೆ ಅಂಗಳಗಳಲ್ಲಿ 2 ಲಕ್ಷ ಸಸಿ ನೆಡಲು ನಿರ್ಧರಿಸಲಾಗಿದೆ. ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆ. ಇದಕ್ಕಾಗಿ 14 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.