
ನವದೆಹಲಿ: 2008 ರ ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಅಪರಾಧಿ ಆರಿಜ್ ಖಾನ್ ಗೆ ದೆಹಲಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಭಯೋತ್ಪಾದಕ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಜೊತೆಗೆ ಸಂಬಂಧ ಹೊಂದಿರುವ ಆರೋಪಿತನಾದ ಆರಿಜ್ ಖಾನ್ ಗೆ ಮರಣ ದಂಡನೆ ವಿಧಿಸಬೇಕೆಂದು ದೆಹಲಿ ಪೊಲಿಸರು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಿ ನ್ಯಾಯಾಂಗ ರಕ್ಷಕರಾಗಿದ್ದ ಕಾನೂನು ಜಾರಿ ಅಧಿಕಾರಿ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಕೋರ್ಟ್ ಗೆ ತಿಳಿಸಿದ್ದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಯಾದವ್, 11 ಲಕ್ಷ ರೂಪಾಯಿ ದಂಡ ವಿಧಿಸಿದ್ದು ಮೋಹನ್ ಚಂದ್ ಶರ್ಮಾ ಕುಟುಂಬದವರಿಗೆ ತಕ್ಷಣವೇ 10 ಲಕ್ಷ ರೂಪಾಯಿ ನೀಡಲು ತಿಳಿಸಿದ್ದಾರೆ.
2018 ರಲ್ಲಿ ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ಬಾಟ್ಲಾ ಹೌಸ್ ಎನ್ ಕೌಂಟರ್ ಮುಖಾಮುಖಿಯಲ್ಲಿ ದೆಹಲಿ ಪೊಲೀಸ್ ವಿಶೇಷ ವಿಭಾಗದ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮಾ ಕೊಲೆಯಾಗಿದ್ದರು.
ಆರಿಜ್ ಖಾನ್ ಪರ ವಕೀಲ ಎಂ.ಎಸ್. ಖಾನ್ ಮರಣದಂಡನೆಯನ್ನು ವಿರೋಧಿಸಿದ್ದಲ್ಲದೇ, ಘಟನೆಯನ್ನು ಪೂರ್ವನಿಯೋಜಿತವಾಗಿ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಾರ್ಚ್ 8 ರಂದು ನ್ಯಾಯಾಲಯವು ಅರಿಜ್ ಖಾನ್ ಮತ್ತು ಅವನ ಸಹಚರರು ಪೊಲೀಸ್ ಅಧಿಕಾರಿಯ ಹತ್ಯೆಗೆ ಕಾರಣರಾಗಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿತ್ತಲ್ಲದೇ ಇಂದು ಮರಣದಂಡನೆ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ 2013 ರ ಜುಲೈನಲ್ಲಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಶಹಜಾದ್ ಅಹ್ಮದ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.