ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಕರ್ನಾಟಕ ಧನವಿನಿಯೋಗ ವಿಧೇಯಕ 2020ಕ್ಕೆ ಒಪ್ಪಿಗೆ ಪಡೆಯುವ ಮೊದಲು ಅವರು ಈ ಕುರಿತು ಮಾತನಾಡಿ, ಕೊರೋನಾ ಸಂಕಷ್ಟದ ನಡುವೆಯೂ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧರಿಗೆ ಮಾಸಿಕ ಪಿಂಚಣಿ ವಿತರಣೆ ನಿಲ್ಲಿಸಲಾಗಿದೆ ಎನ್ನುವ ಪ್ರತಿಪಕ್ಷ ಸದಸ್ಯರ ಆರೋಪವನ್ನು ತಳ್ಳಿಹಾಕಿದ ಸಚಿವರು, ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಇದ್ದರೂ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಯಾವುದೇ ಯೋಜನೆಗಳ ತಡೆಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಧ್ಯಾ ಸುರಕ್ಷಾ ಸೇರಿದಂತೆ ನಾನಾ ಯೋಜನೆಗಳ ಒಟ್ಟು 69 ಲಕ್ಷ ಫಲಾನುಭವಿಗಳಲ್ಲಿ ಅಕ್ಟೋಬರ್ ವರೆಗೆ 67.5 ಲಕ್ಷ ಜನರಿಗೆ ಹಣ ಬಿಡುಗಡೆಯಾಗಿದೆ. ತಾಂತ್ರಿಕ ಸಮಸ್ಯೆ ಸೇರಿ ಮೊದಲಾದ ಕಾರಣಕ್ಕೆ ಕೆಲವರಿಗೆ ಸಂದಾಯವಾಗಿಲ್ಲ. ತಿಂಗಳ ಒಳಗೆ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.