ಬೆಂಗಳೂರು: ಪರಿಶಿಷ್ಟ ವರ್ಗದವರು ಮತ್ತು ಹಿಂದುಳಿದ ಸಮುದಾಯಗಳಿಗೆ ಉದ್ಯೋಗ, ಉದ್ಯಮ, ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪೂರಕ ಯೋಜನೆಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಜುಕೇಶನ್, ಎಂಪ್ಲಾಯ್ಮೆಂಟ್ ಮತ್ತು ಎಂಟರ್ ಪ್ರೆನ್ನರ್ ಶಿಪ್ – ಈ ಮೂರು ‘ಇ’ ಗಳ ಮೂಲಕ ಹಿಂದುಳಿದವರ ಅಭಿವೃದ್ಧಿಗೆ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ.
ಪರಿಶಿಷ್ಟ ವರ್ಗದವರು, ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ವಲಯದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಹೀಗಾಗಿ ಈ ವರ್ಗಕ್ಕೆ ಸೇರಿದ ಬಿಪಿಎಲ್ ಕುಟುಂಬದವರಿಗೆ ಶಿಕ್ಷಣ-ಉದ್ಯೋಗ -ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪೂರಕ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ವರ್ಗದವರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ನಿರ್ಮಿಸಿದ ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು, ಉದ್ಯಮ ಮತ್ತು ಉದ್ಯೋಗಗಳಿಗೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆ ರೂಪಿಸಲಾಗುವುದು, ಅಂತರರಾಷ್ಟ್ರೀಯ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಚಿಂತನೆ ಇದೆ. ಇನ್ನು ಸಿಇಟಿ, ನೀಟ್ ನಂತಹ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.