ಬೆಂಗಳೂರು: ದೇಶ ವಿರೋಧಿ ಮತ್ತು ಅಸಂವಿಧಾನಿಕ ಹೇಳಿಕೆ ನೀಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಫ್ಐ ನಾಯಕರು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದರು.
ಈ ಹೇಳಿಕೆಯೊಂದಿಗೆ PFI ಸಂಸ್ಥೆ ತನ್ನ ನಿಜ ಬಣ್ಣವನ್ನು ಜಗತ್ತಿಗೆ ತೋರಿಸಿದೆ ಎಂದು ಸಚಿವ ಬೊಮ್ಮಾಯಿ ವ್ಯಾಖ್ಯಾನಿಸಿದ್ದು, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಆರ್.ಎಸ್.ಎಸ್. ಸಂಘಟನೆ ದೇಶಭಕ್ತಿಯ ಪ್ರತೀಕ. ಇದರ ವಿರುದ್ಧ PFI ಮುಖಂಡರು ಟೀಕೆ ಮಾಡಿರುವುದು ಖಂಡನಾರ್ಹ. ಇದು ದೇಶದ ಜನತೆಯನ್ನು ಒಡೆಯಲು ಮಾಡಿರುವ ಹುನ್ನಾರ. ಈ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.