
ಯಲಬುರ್ಗಾ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ನನ್ನ ಶಾಸಕ ಸ್ಥಾನದ 50,000 ರೂ. ವೇತನವನ್ನು ಪ್ರತಿ ತಿಂಗಳು ನೀಡುವುದಾಗಿ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಅವರು, ನಾನು ಯಾವುದೇ ಪ್ರಚಾರ ಪಡೆಯುವ ಉದ್ದೇಶದಿಂದ ಶಾಸಕರ ವೇತನ ನೀಡುತ್ತಿಲ್ಲ. ಎಲ್ಲವನ್ನು ಸರ್ಕಾರವೇ ನೀಡುವುದಾದರೆ ಅದರಲ್ಲಿ ನನ್ನದೊಂದು ಸಣ್ಣ ಸೇವೆ ಇರಲಿ ಎಂಬ ಉದ್ದೇಶದಿಂದ ನನ್ನ ಶಾಸಕ ಸ್ಥಾನದ 50,000 ರೂ. ವೇತನವನ್ನು ಪ್ರತಿ ತಿಂಗಳು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ನಾನು ಕೂಡ ಕೈಜೋಡಿಸಲು ಪ್ರತಿ ತಿಂಗಳು ನನ್ನ ವೇತನವನ್ನು ಯೋಜನೆಗೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದೇನೆ. ನಾನು ಈ ಹಿಂದೆಯೂ ವೇತನ ಪಡೆದುಕೊಂಡಿಲ್ಲ. ಬೇರೆ ಯೋಜನೆಗೆ ಆಗಲೂ ನನ್ನ ವೇತನ ನೀಡಿದ್ದೆ ಎಂದು ತಿಳಿಸಿದ್ದಾರೆ.