ಕೊಪ್ಪಳ: ಮುಖ್ಯಮಂತ್ರಿ ಆಗಬೇಕೆಂದು ಅನೇಕರು ಆಸೆ ಪಡುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ, ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬೇರೆಯವರನ್ನು ಮುಖ್ಯಮಂತ್ರಿ ಮಾಡುವುದಾದರೆ ನಾನು ಕೂಡ ಆಕಾಂಕ್ಷಿಯಾಗಿದ್ದೇನೆ. ಅದೃಷ್ಟವಿದ್ದರೆ ನಾನು ಏಕೆ ಮುಖ್ಯಮಂತ್ರಿ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ಹೊಸದಾಗಿ ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ಸಿದ್ದರಾಮಯ್ಯನವರ ಆಶೀರ್ವಾದ ಬೇಕಿದೆ. ಸಿದ್ದರಾಮಯ್ಯ ಹೇಳಿದವರು ಮುಖ್ಯಮಂತ್ರಿ ಆಗುತ್ತಾರೆ. ಅಂತಹ ಸಂದರ್ಭ ಬಂದರೆ ಸಿದ್ದರಾಮಯ್ಯ ನನ್ನ ಹೆಸರನ್ನೇ ಹೇಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಲಿಂಗಾಯತ ಸಮುದಾಯದ ಹಿರಿಯ ನಾಯಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಜಾತಿ ವಿಷಯ ಮುನ್ನೆಲೆಗೆ ತಂದಲ್ಲಿ ಲಿಂಗಾಯಿತರಲ್ಲಿ ನಾನು ಮತ್ತು ಬಿ.ಆರ್. ಪಾಟೀಲ್ ಮಾತ್ರ ಹಿರಿಯ ಶಾಸಕರಿದ್ದೇವೆ. ಹೆಚ್ಚು ಬಾರಿ ಗೆದ್ದ ಲಿಂಗಾಯಿತ ಶಾಸಕ ನಾನು ಒಬ್ಬನೇ. ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಕೊಡುವುದಾದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತೇನೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.