ಹುಬ್ಬಳ್ಳಿ: ಪಕ್ಷದ ಕೆಲವು ಆಂತರಿಕ ಸಮಸ್ಯೆಯಿಂದಾಗಿ ನನಗೆ ಸಭಾಪತಿ ಸ್ಥಾನ ಸಿಗುತ್ತಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಪಕ್ಷದ ಕೆಲವು ಸದಸ್ಯರು ನನ್ನನ್ನು ಸಭಾಪತಿ ಮಾಡಲು ವಿರೋಧಿಸಿದ್ದ ಕಾರಣ ವಿಳಂಬವಾಗಿದ್ದು, ಅಧಿವೇಶನ ಆರಂಭವಾದ ನಂತರ ಸಭಾಪತಿ ಸ್ಥಾನಕ್ಕೆ ತಮ್ಮನ್ನು ನೇಮಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿಯ 31 ವಿಧಾನ ಪರಿಷತ್ ಸದಸ್ಯರಲ್ಲಿ 27 ಮಂದಿ ನನ್ನ ಪರವಾಗಿದ್ದು, ನಾಲ್ವರು ವಿರೋಧಿಸುತ್ತಿದ್ದಾರೆ. ರಾಜಕಾರಣದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬಂದಿದೆ. ಅಧಿವೇಶನ ಆರಂಭವಾದ ನಂತರ ತಮ್ಮನ್ನು ಸಭಾಪತಿ ಮಾಡುವ ವಿಶ್ವಾಸವಿದೆ. ಮುಖ್ಯಮಂತ್ರಿಗಳು, ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.