ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಡಿಸೆಂಬರ್ 21 ರಂದು ಚುನಾವಣೆ ನಿಗದಿಯಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನೂತನ ಸಭಾಪತಿಯ ಆಯ್ಕೆ ನಡೆಯಲಿದೆ.
ಆಡಳಿತರೂಢ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತ ಹೊಂದಿದ್ದು, ಆಡಳಿತ ಪಕ್ಷದವರೇ ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಅವರನ್ನೇ ಮತ್ತೆ ಸಭಾಪತಿಯಾಗಿ ಪುನರಾಯ್ಕೆ ಮಾಡುವುದು ಖಚಿತವಾಗಿದೆ.
ತಮ್ಮ ಹೆಸರನ್ನು ಸಭಾಪತಿ ಸ್ಥಾನಕ್ಕೆ ಅಂತಿಮಗೊಳಿಸಿ ನಾಮಪತ್ರ ಸಲ್ಲಿಕೆಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿರುವುದಾಗಿ ಬಸವರಾಜ ಹೊರಟ್ಟಿ ಅವರೇ ಶನಿವಾರ ತಿಳಿಸಿದ್ದರು.