ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಂಪೂರ್ಣ CWMA ಆದೇಶವನ್ನೇ ಎತ್ತಿಹಿಡಿದಿದೆ. ವಾಸ್ತವದ ಆಧಾರದಲ್ಲಿ ತೀರ್ಪು ನೀಡಬೇಕಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾವೇರಿ ವಿಚಾರದಲ್ಲಿ ಸುಪ್ರೀಂಕೊರ್ಟ್ ಎರಡು ರಾಜ್ಯಗಳ ವಾದ ಆಲಿಸಿ CWMA ಆದೇಶ ಎತ್ತಿ ಹಿಡಿದಿದೆ. ಮುಂದಿನ 15 ದಿನ ಸಿಡಬ್ಲುಎಂಎ ಆದೇಶ ಪಾಲನೆ ಮಾಡಬೇಕು ಎಂದಿರುವುದು ದುರಾದೃಷ್ಟ. ಮತ್ತೊಮ್ಮೆ ಕರ್ನಾಟಕದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕಿದೆ. ಕೇವಲ ಕರ್ನಾಟಕದ ಡ್ಯಾಮ್ ಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಡ್ಯಾಮ್ ಗಳಲ್ಲಿ ನ ನೀರಿನ ಮಟ್ಟ ಲೆಕ್ಕ ಹಾಕಬೇಕು ಎಂದು ಆಗ್ರಹಿಸಿದರು.
ಸಿಡಬ್ಲುಎಂಎ ಮೊದಲ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಮೆಲ್ಮನವಿ ಸಲ್ಲಿಸಬೇಕಿತ್ತು. ಆಗ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಎರಡು ಬಾರಿ ನೀರು ಬಿಟ್ಟು ಈಗ ಸುಪ್ರೀಂಕೊರ್ಟ್ ಮುಂದೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಸಂಪೂರ್ಣ ವಾಗಿ ಸಿಡಬ್ಲುಎಂಎ ಮೇಲೆ ಅವಲಂಬನೆ ಆಗಿದೆ. ಸಿಡಬ್ಲುಆರ್ ಸಿ, ಸಿಡಬ್ಲುಎಂಎ ಎರಡೂ ಧೋರಣೆ ಸರಿಯಿಲ್ಲ. ಸಿಡಬ್ಲುಎಂಎ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ನೋಡಬೇಕು. ಕೇವಲ ಅಂಕಿ ಅಂಶಗಳನ್ನು ಇಟ್ಟುಕೊಂಡು ಆದೇಶ ಮಾಡುತ್ತಿವೆಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಕೇವಲ ನಮ್ಮಲ್ಲಿ ನೀರಿಲ್ಲ ಅಂತ ಹೇಳುವುದಷ್ಟೇ ಅಲ್ಲ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರ ಇಲ್ಲಿ ಎಲ್ಲ ಭಾಗದ ಜನರು ಬರುತ್ತಾರೆ.ತಮಿಳುನಾಡಿಗೆ ನವೆಂಬರ್ ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರು ಉಳಿಸಿಕೊಳ್ಳಲಾದರೂ ರಾಜ್ಯ ಸರ್ಕಾರ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.