ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ವೇಳೆ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಪತಿ ಅಂಬಿಕಾಪತಿ ಹಾಗೂ ಸಹೋದರ ಪ್ರದೀಪ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಐಟಿ ದಾಳಿ ವೇಳೆ ಅಂಬಿಕಾಪತಿ ಸಹೋದರನ ಫ್ಲ್ಯಾಟ್ ನಲ್ಲಿ 40ಕೋಟಿಗೂ ಅಧಿಕ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ಲಾಬಿಗಳು ಬಹಿರಂಗವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಗುತ್ತಿಗೆದಾರರು ಬಿಲ್ ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ನಡೆದಿತ್ತು. ಈಗ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕಿರಲಿಲ್ಲ. ಈಗ 42 ಕೋಟಿ ಹಣ ಸಿಕ್ಕಿರುವುದಕ್ಕೂ ಗುತ್ತಿಗೆದಾರರ ಹಣ ಬಿಡುಗಡೆ ಆಗದಿದ್ದಕ್ಕೂ ಲೆಕ್ಕ ಸರಿ ಇದೆ. ಸಿಕ್ಕಿ ಬಿದ್ದವರು ಕಾಂಗ್ರೆಸ್ ಗೆ ಸೇರಿದ ಕಾಂಟ್ರ್ಯಾಕ್ಟರ್ ಎಂದು ಹೇಳಿದ್ದಾರೆ.
ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷರು ಬಹಳ ಆತ್ಮೀಯರು. ಯಾರು ಕಮಿಷನ್ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದಾರೆ. ಬಡಪಾಯಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.