ಹುಬ್ಬಳ್ಳಿ: ರಾಜ್ಯ ಸರ್ಕಾರ ಬರಿ ಹೇಳಿಕೆಗಳಲ್ಲಿ ಆಡಳಿತ ನಡೆಸುತ್ತಿದೆ. ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಭೀಕರ ಬರ ಇದೆ. ಸಿಎಂ ಸಿದ್ದರಾಮಯ್ಯ ನಾವು ಸಮರ್ಥವಾಗಿ ಬರ ಪರಿಹಾರ ನೀಡುತೇವೆ ಎಂದಿದ್ದರು. ಬರಗಾಲ ಆವರಿಸಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬರಿ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಸರ್ಕಾರ ರೈತರ ಪಾಲಿಗೆ ಜೀವಂತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಇದೆಯೋ ಇಲ್ಲವೋ ಎಂಬುದು ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಗೊತ್ತಾಗುತದೆ. ರೈತರ ಪಾಲಿಗಂತು ಸರ್ಕಾರ ಇಲ್ಲ ಎಂಬುದು ಸ್ಪಷ್ಟ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿ ಹಲವು ದಿನ ಕಳೆದಿದೆ. ಆದರೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಎಡವಟ್ಟುಗಳನ್ನೇ ಮಾಡುತ್ತಾ ಬಂದಿದೆ. ಸರ್ಕಾರದ ಬಳಿ ಇರುವ ವಿಕೋಪ ನಿಧಿ ಬಿಡುಗಡೆ ಮಾಡಲಿ ನಂತರ ಕೇಂದ್ರದಿಂದ ಹಣ ಪಡೆಯಲಿ ಎಂದು ಒತ್ತಾಯಿಸಿದರು.