ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ರಾತ್ರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅವರು ಇಂದು ಇಲ್ಲವೇ ನಾಳೆ ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಆಗಲಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತೀವ್ರ ಮಂಡಿ ನೋವಿನ ಕಾರಣದಿಂದಾಗಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ತಪಾಸಣೆಗೆ ಒಳಗಾದ ಸಂದರ್ಭದಲ್ಲಿ ಹೃದಯದಲ್ಲಿ ತೊಂದರೆ ಇರುವುದು ಗೊತ್ತಾಗಿದೆ. ತಕ್ಷಣವೇ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ನಿಮ್ಮೆಲ್ಲರ ಶುಭ ಹಾರೈಕೆಗಳೊಂದಿಗೆ ಆದಷ್ಟು ಬೇಗ ಗುಣಮುಖರಾಗಿ ಬರುತ್ತೇನೆ. ಬೇರೆ ರೋಗಿಗಳಿಗೆ ತೊಂದರೆಯಾಗುವುದರಿಂದ ಯಾರೂ ಆಸ್ಪತ್ರೆಗೆ ಬರಬಾರದು ಎಂದು ಬಸವರಾಜ ಬೊಮ್ಮಾಯಿ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
‘’ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ನಿಮ್ಮ ಮುಂದೆ ಬರಲು ಕಾತುರದಿಂದ ಕಾಯುತ್ತಿದ್ದೇನೆ. ಸದ್ಯ ಆಸ್ಪತ್ರೆಯಲ್ಲಿರುವ ಕಾರಣ, ನೀವೆಲ್ಲರೂ ಆಸ್ಪತ್ರೆಗೆ ನನ್ನನ್ನು ನೋಡಲು ಬಂದರೇ, ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನೀವ್ಯಾರು ಆಸ್ಪತ್ರೆಗೆ ಬರಬಾರದೆಂದು ಕಳಕಳಿಯಾಗಿ ಮನವಿ ಮಾಡುತ್ತೇನೆ.
ನಿಮ್ಮ ಶುಭ ಹಾರೈಕೆಗಳು ನನ್ನನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿ ಮಾಡಿದ್ದು, ಶೀಘ್ರದಲ್ಲಿಯೇ ಜನಸೇವೆಗೆ ಮರಳುತ್ತೇನೆ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಅನಂತ ಅನಂತ ಧನ್ಯವಾದಗಳು’’ ಎಂದು ತಿಳಿಸಿದ್ದಾರೆ.