ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಸಂಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ರಕ್ಷಣೆಗೆ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ. ಅವರು ಯಾವುದೇ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ದರಿದ್ದೇವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ದ್ವೇಷಕ್ಕಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಕ್ಕಿಕೊಂಡಿದೆ. ಅದರ ಹಣ ಚುನಾವಣಾ ರಾಜಕಾರಣಕ್ಕೆ, ಸಾರಾಯಿ ಖರೀದಿಗೆ ಹೋಗಿದೆ. ಈ ಬಗ್ಗೆ ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ಕೊಡಬೇಕಾಗುತ್ತದೆ ಎಂದು ಬಿಜೆಪಿಯ ಅವಧಿಯಲ್ಲಿ 21 ಹಗರಣ ಆಗಿದೆ ಎಂದು ಆರೋಪಿಸಿದ್ದಾರೆ ಎಂದರು.
ಯಾವುದೆ ತನಿಖೆ ನಡೆಸಲಿ ನಾವು ಎದುರಿಸಲು ಸಿದ್ದರಿದ್ದೇವೆ. ಆದರೆ, ತನಿಖೆ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗಬಾರದು, ಅವರು ಮಾಡಿರುವ ಆರೋಪಕ್ಕೆ ದಾಖಲೆ ನೀಡಬೆಕಿತ್ತು ಎಂದು ಹೇಳಿದರು.
ನನ್ನ ವಿರುದ್ದ ಮಾಡಿರುವ ಆರೋಪದಲ್ಲಿ ನಾನು ಎಪಿಎಂಸಿ ಸಚಿವನಾಗಿರಲಿಲ್ಲ ಆಗ ಗೃಹ ಸಚಿವನಾಗಿದ್ದೆ, ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರೂ. ಜೊತೆಗೆ ಬಡ್ಡಿ ಸಮೇತ 52 ಕೋಟಿ ರೂ ವಸೂಲಿ ಮಾಡಲಾಗಿತ್ತು. ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ. ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ ಎಂದರು.
ವಾಲ್ಮೀಕಿ ನಿಗಮ ಒಂದೇ ಅಲ್ಲ ಎಲ್ಲ ಇಲಾಖೆಗಳಲ್ಲಿ ಹಗರಣ ಹೊರ ಬರುತ್ತಿವೆ ಕೊಮುಲ್ ನಿಂದ ಹಿಡಿದು ಪ್ರವಾಸೋದ್ಯಮ ಇಲಾಖೆ ಹಗರಣ ಎಲ್ಲವೂ ಹೊರ ಬರುತ್ತಿವೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಅನ್ನುವಂತಾಗಿದೆ. ಸ್ವಾತಂತ್ರ್ಯಾ ನಂತರ ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ತನಿಖೆ ನಡೆಸಲಿ ನಾವು ಎದುರಿಸುತ್ತೇವೆ ಹೊರತು ಅವರ ರೀತಿ ಇಡಿ ಯಾಕೆ, ಸಿಬಿಐ ಯಾಕೆ ಬಂತು ಅಂತ ಕೇಳುವುದಿಲ್ಲ. ಪೊಲಿಸ್ ಇಲಾಖೆಯನ್ನು ತಮ್ಮ ವಿರುದ್ದ ಬಂದಿರುವ ಆರೋಪದಿಂದ ರಕ್ಷಣೆ ಪಡೆಯಲು ದುರ್ಬಳಕೆ ಮಾಡಿಕೊಂಡರೆ ಆ ಹಗರಣವೂ ಶೀಘ್ರವೇ ಹೊರ ಬರಲಿದೆ ಎಂದು ಹೇಳಿದರು.
ಇಡಿ ತನಿಖೆ ಬಗ್ಗೆ ಇವರಿಗೆ ಯಾಕೆ ಭಯ. ಈಗಾಗಲೇ ಇವರ ವಿರುದ್ದ ಸುಮಾರು 40 ಕ್ಕಿಂತ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಬಿಬಿಎಂಪಿಯಲ್ಲಿ ಗುತ್ತಿಗೆದಾರಿಗೆ ಶೇ 68% ರಷ್ಟು ಹೆಚ್ಚಿಗೆ ನೀಡಿದ್ದಾರೆ. ಇವೆಲ್ಲವೂ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಯವರು ಶುಕ್ರವಾರ ಅಧಿವೇಶನ ಕೊನೆ ಗಳಿಗೆಯಲ್ಲಿ ಆರೋಪ ಮಾಡಿ ವಿರೋಧ ಪಕ್ಷದವರು ಬಾಯಿಮುಚ್ಚಿಕೊಂಡಿದ್ದಾರೆ ಎನ್ನುತ್ತಾರೆ. ನಾವು ಬಾಯಿ ಮುಚ್ಚಿಕೊಂಡು ಕುಳಿತಿಲ್ಲ. ಸದನದಲ್ಲಿ ಪ್ರತಿಪಕ್ಷದ ಶಾಸಕರನ್ನು ಟಾರ್ಗೆಟ್ ಮಾಡಿದರೂ ಯಾರೂ ಬಗ್ಗುವುದಿಲ್ಲ. ಭ್ರಷ್ಟಾಚಾರದ ಬ್ರಹ್ಮ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.