ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಮೈಕ್ರೊ ಫೈನಾನ್ಸ್ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಬಸವರಾಜ್ ಬೊಮ್ಮಾಯಿ, ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಆರ್‌ಬಿಐ ನಿಯಮಗಳಿವೆ. ಸುಗ್ರೀವಾಜ್ಞೆ ಬಹಳಷ್ಟಿವೆ. ಆದರೆ, ಅವುಗಳನ್ನು ಜಾರಿಗೆ ತರುವ ಕೆಲಸ ಆಗಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಪೊಲೀಸರು ಕಳ್ಳರ ಜೊತೆ ಸೇರಿದರೆ ಮೈಕ್ರೋ ಫೈನಾನ್ಸ್ ಹೇಗೆ ನಿಯಂತ್ರಣ ಆಗುತ್ತದೆ? ಮೈಕ್ರೊ ಫೈನಾನ್ಸನ್ನು ಪೊಲೀಸರು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಟ್ರಾನ್ಸಫರ್‌ನಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ದುಡ್ಡು ಕೊಟ್ಟು ಬಂದ ಅಧಿಕಾರಿ ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಮೈಕ್ರೋ ಫೈನಾನ್ಸ್ ಕೂಡ ಒಂದು. ಬಡವರು ಪೊಲಿಸರಿಗೆ ಏನೂ ಕೊಡುವುದಿಲ್ಲ. ಮೈಕೋ ಫೈನಾನ್ಸ್ ಮಾಲಿಕರೇ ಹಣ ಕೊಡುವುದು. ಅದನ್ನು ಮೊದಲು ನಿಯಂತ್ರಣ ಮಾಡಲಿ ಎಂದು ಕಿಡಿಕಾರಿದರು.
ತಮ್ಮ ಹುಳುಕನ್ನು ಮುಚ್ಚಿಟ್ಟುಕೊಂಡು ಮೈಕ್ರೊ ಫೈನಾನ್ಸಿಗೆ ಬೆಂಬಲಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕೇವಲ ಸಭೆ ಮಾಡಿ, ಸುಗ್ರೀವಾಜ್ಞೆ ಮಾಡುವುದರಿಂದ ಏನೂ ಆಗುವುದಿಲ್ಲ. ಏನಾದರೂ ಸಮಸ್ಯೆ ಬಂದರೆ ಸಭೆ ಮಾಡುವ ಚಾಳಿ ಮುಖ್ಯಮಂತ್ರಿಗಳಿಗಿದೆ. ಅದರಿಂದ ಏನೂ ಪರಿಹಾರ ಆಗುವುದಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಅನುಷ್ಠಾನಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.