
ನವದೆಹಲಿ: ಸಚಿವರ ಮೇಲೆ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ, ಹನಿಟ್ರ್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡುತ್ತಿದೆ. ಇದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಇರುವ ಕಡೆಯಲೆಲ್ಲ ಹತ್ತಾರು ಹಗರಣಗಳು ಆಗಿವೆ ಎಂದು ವಾಗ್ದಾಳಿ ನಡೆಸಿಇದರು,
ವಿಧಾನಸಭೆಯಲ್ಲಿ ನೈತಿಕ ಅಧಃಪತನ ನೋಡಿದ್ದೇವೆ. ಮನಿಕ್ರೈಸಿಸ್ ಇತ್ತು, ಈಗ ಹನಿ ಕ್ರೈಸಿಸ್ ಶುರುವಾಗಿದೆ. ಸರ್ಕಾರ ಆರ್ಥಿಕವಾಗಿ , ನೈತಿಕವಾಗಿ ದಿವಾಳಿಯಾಗಿದೆ. ಕ್ಯಾಬಿನೆಟ್ ಸಚಿವರು ಹನಿಟ್ರ್ಯಾಪ್ ಆಗುತ್ತಿದೆ ಎಂದು ಹೇಳುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ಕಳೆದ 15 ದಿನಗಳಿಂದ ವಿಧಾನಸೌಧ ಮೊಗಸಾಲೆಯಲ್ಲಿ ಹನಿಟ್ರ್ಯಾಪ್ ವಿಚಾರ ಚರ್ಚೆಯಾಗುತ್ತಿದೆ. ಇಂತಹ ಕ್ಯಾಬಿನೆಟ್ ಗೆ ಏನು ಹೇಳಬೇಕು? ಇದು ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್. ಸಿಎಂ ಸಿದ್ದರಾಮಯ್ಯ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
48 ಜನರ ಸಿಡಿ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಅವರಿಗೆ ಮಾಹಿತಿ ಇದ್ದರೆ ಅವರು ಎಲ್ಲಾ ಮಾಹಿತಿಗಳನ್ನು ಕೊಡಬೇಕು. ಪೂರ್ಣಪ್ರಮಾಣದ ತನಿಖೆಯಾಗಬೇಕು ಎಂದು ಹೇಳಿದರು.