ಬೆಂಗಳೂರು: 25 ಕೋಟಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಅನುದಾನ ನೀಡಿಲ್ಲ. ಅನುದಾನದ ಹಣ ಎಲ್ಲಿ? ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ನಾನು ಸಿಎಂ ಆಗಿದ್ದಾಗ 25 ಕೋಟಿ ಅನುದಾನ ಕೊಟ್ಟಿದ್ದೆ. ಇವರು ಈಗ ಎಷ್ಟು ಕೊಡಬೇಕು ಕಾಂಗ್ರೆಸ್ ಶಾಸಕರಿಗೆ? ಅತೃಪ್ತಿ ಶಮನಕ್ಕೆ 25 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ನಯಾಪೈಸೆ ನೀಡಿಲ್ಲ. ಇವರ ಯೋಗ್ಯತೆಗೆ ಸಣ್ಣ ಬೋರ್ ವೆಲ್ ಹಾಕಿಸಲು ಆಗಿಲ್ಲ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬರಿ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅನುದಾನದ ಬಗ್ಗೆ ಕೇಂದ್ರ ಸರ್ಕಾರ ಚರ್ಚೆಗೆ ಬರಲಿ ಎಂದು ಸವಾಲು ಬೇರೆ ಹಾಕಿದ್ದಾರೆ. ಅದು ಆಗದ ಕೆಲಸ ಎಂಬುದು ಅವರಿಗೆ ಗೊತ್ತಿದೆ. ಅದಕ್ಕೆ ಸವಾಲು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಯತೀಂದ್ರ ಅವರ ಹೇಳಿಕೆ ಅರ್ಥವೇನು? ಕಾಂಗ್ರೆಸ್ ಗೆ ಕಡಿಮೆ ಸೀಟು ಬಂದರೆ ಏನು? ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಬರುವುದು ಬಿಜೆಪಿಗೆ. ಹಾಗಾದರೆ ಯತೀಂದ್ರ ಪ್ರಕಾರ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದಿಲ್ಲವೇ? ಎಂದು ಟಾಂಗ್ ನೀಡಿದ್ದಾರೆ.