ಬೆಂಗಳೂರು: ಬಿಟ್ ಕಾಯಿನ್ ಅವ್ಯವಹಾರ ಪ್ರಕರಣದಿಂದ ಯಾರನ್ನೂ ಬಿಡಲ್ಲ, ಯಾರೇ ಇದ್ದರೂ ಬಲಿ ಹಾಕ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಇಬ್ಬರು ಇದ್ದಾರೆ ಹೇಳ್ತಾರೆ. ಇಬ್ಬರು ಎಂದರೆ ಯಾರು ಇದ್ದಾರೆ ಎಂದು ಅವರ ಹೆಸರನ್ನು ಹೇಳಿ. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಿಟ್ಟ ಅವರಿಂದ ನಾವು ಬುದ್ಧಿ ಕಲಿಯಬೇಕಿಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಅವರ ಬಳಿ ಮಾಹಿತಿ ಇದ್ದರೆ ಪೊಲೀಸರಿಗೆ ಅಥವಾ ಇಡಿಯವರಿಗೆ ನೀಡಲಿ. ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಆಧಾರ ರಹಿತವಾಗಿ ಇಂತಹ ಆರೋಪ ಮಾಡಬಾರದು ಎಂದು ಕೆಂಡಾಮಂಡಲರಾಗಿದ್ದಾರೆ.
ಯಾರೇ ತಪ್ಪಿತಸ್ಥರಾಗಿದ್ದರೂ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಬಿಟ್ ಕಾಯಿನ್ ಪ್ರಕರಣವನ್ನು ಮೊದಲು ಹೇಳಿದವರು ನಾವು, ಇದನ್ನು ಬಯಲುಗೊಳಿಸಿದವರು ನಾವು, ಇಡಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದು ನಾವು. ನಮ್ಮ ಮೇಲೆಯೇ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದರ ಹಿಂದೆ ಪ್ರಭಾವಿಗಳಿದ್ದಾರೆ ಎನ್ನುವ ಕಾಂಗ್ರೆಸ್ ನವರು ಅವರ ಹೆಸರನ್ನು ಹೇಳಲಿ. ಯಾರೇ ಇದ್ದರೂ ಕ್ರಮಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕೇವಲ ಒಂದು ಟ್ವೀಟ್ ಆಧಾರದಲ್ಲಿ ಕಾಂಗ್ರೆಸ್ ನಾಯಕರು ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ. ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.