ಬೆಂಗಳೂರು: ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ದೆಹಲಿಯಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ ಮಾಡಿರುವ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜಯಚಂದ್ರ ಅವರು ಹಿರಿಯರು, ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರಿಗೆ ದೆಹಲಿಗೆ ಹೋಗಿ ಇರುವ ಶಿಕ್ಷೆ ಯಾಕೆ ಕೊಟ್ರಿ? ದೆಹಲಿಯಲ್ಲಿ ವಿಶೇಷ ಪ್ರತಿನಿಧಿ ಎಂದರೆ ಕರ್ನಾಟಕ ಭವನದಲ್ಲಿ ಒಂದು ಕಚೇರಿ ಮಾಡಿ ಸುಮ್ಮನೆ ಇರುವುದು ಅಷ್ಟೇ ಎಂದು ಹೇಳಿದರು.
ಬೊಮ್ಮಾಯಿ ಹೇಳಿಕೆಗೆ ಧ್ವನಿಗೂಡಿಸಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಟಿ.ಬಿ.ಜಯಚಂದ್ರ ಅವರು ಕಾನೂನು ಸಲಹೆಗಾರರು, ಅವರು ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಇರಬೇಕಾದ ವ್ಯಕ್ತಿ. ಅವರಿಗೆ ಮಂತ್ರಿ ಸ್ಥಾನ ಕೊಡಲು ಆಗಲ್ಲ ಅಂತಾ ಈ ಹುದ್ದೆ ಕೊಟ್ಟು ಕೂರಿಸಿರುವುದು ಸರಿಯಲ್ಲ ಎಂದು ಟಾಂಗ್ ನೀಡಿದರು. ಇದೇ ವೇಳೆ ನಿನ್ನೆ ಸಿಎಂ ಸಿದ್ದರಾಮಯ್ಯ ನಾನೇ ಸಿನಿಯರ್ ಎಂದಿದ್ದಾರೆ ಜಯಚಂದ್ರ ಅವರು ಸಿನೀಯರ್. ಅವರು 1978ರಲ್ಲಿ ಶಾಸಕರಾದವರು ಎಂದು ಮಾಜಿ ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.