ಬೆಂಗಳೂರು: ವಕ್ಫ್ ಮಂಡಳಿಯಿಂದ ರೈತರ ಭೂಮಿ ಕಬಳಿಕೆ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆ ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ಮಂಡಳಿ, ರೈತರು, ಮಠ, ದೇವಸ್ಥಾನಗಳ ಆಸ್ತಿಯನ್ನು ತನ್ನದೆಂದು ಹೇಳಿ ನೋಟಿಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಪ್ರಸಕ್ತವಿರುವ ವಕ್ಫ್ ಕಾಯ್ದೆಯಿಂದಾಗಿ ಖಾಸಗಿ ಭೂಮಿ, ಕೃಷಿ ಭೂಮಿ, ಐತಿಹಾಸಿಕ ಸ್ಥಳ ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಲಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.
ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿದರೆ ಪಾರದರ್ಶಕತೆ ಜೊತೆಗೆ ಅರ್ಹ ಭೂ ಮಾಲೀಕರ ಹಕ್ಕನ್ನು ಕಾಪಾಡಿದಂತಾಗುತ್ತದೆ. ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಬಳಕೆಗೆ ಬಳಸಲು ಅನುಕೂಲವಾಗಲಿದೆ. ಯಾವುದೇ ಜಾತಿ, ಧರ್ಮಾತೀತವಾಗಿ ವಕ್ಫ್ ಆಸ್ತಿಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ಮುಂತಾದವುಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಹೀಗಾಗಿ ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ತಾವು ಕೂದಲೇ ವಕ್ಫ್ ಆಸ್ತಿ ನಿರ್ವಹಣೆಗೆ ನೀತಿ ರೂಪಿಸುವಂತೆ ಕೋರುತ್ತೇನೆ. ದೇಶದ ನಾಗರಿಕರ ಹಕ್ಕನ್ನು ರಕ್ಷಿಸಲು ತಕ್ಷಣ ಮಧ್ಯಪ್ರವೇಶ ಮಡುವಂತೆ ಮನವಿ ಮಾಡಿದ್ದಾರೆ.