ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಬ್ಬರೂ ಬದಲಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಬದಲಾಗುವವರೆಗೂ ನಾನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹೋಗಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾಗುವ ಎಲ್ಲಾ ಅರ್ಹತೆ ನನಗಿದೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಯಾವ ಸರ್ಕಾರಿ ಭೂಮಿಯನ್ನು ಲೂಟಿ ಮಾಡಿಲ್ಲ. ಹಾಗಾಗಿ ನನಗೆ ರಾಜ್ಯಾಧ್ಯಕ್ಷನಾಗುವ ಎಲ್ಲಾ ಸಾಮರ್ಥ್ಯವಿದೆ. ಅನುಕೂಲವಿದ್ದವರನ್ನು ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರನ್ನಾಗಿ ಮಾಡ್ತಾರೆ. ನಮ್ಮಂತಹ ಪ್ರಾಮಾಣಿಕರನ್ನು ಮಾಡಲ್ಲ ಎಂದು ನೇರಾನೇರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕರ್ನಾಟಕ ಭಾಗದವರಿಗೆ ರಾಜ್ಯಾಧ್ಯಕ್ಷ, ವಿಪಕ್ಷನಾಯಕ ಸ್ಥಾನ ಕೊಡಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರಲ್ಲ. ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕು. ನ್ಯಾಯ ಸಿಗದಿದ್ದರೆ ಹೋರಾಟ ಮಾಡುತ್ತೇನೆ. ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ ಎಂದು ತಿಳಿಸಿದ್ದಾರೆ.