ಬದೌನ್: ಉತ್ತರ ಪ್ರದೇಶದ ಬದೌನ್ ನಲ್ಲಿ ಕ್ಷೌರಿಕನೊಬ್ಬ ನೆರೆಹೊರೆಯ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದಿದ್ದಾನೆ. ಇನ್ನೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ನಂತರ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಕ್ಷೌರಿಕನನ್ನು ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಿ ಸಮಿತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ತನ್ನ ನೆರೆಯ ಮನೆಗೆ ನುಗ್ಗಿ 11 ಮತ್ತು 6 ವರ್ಷದ ಇಬ್ಬರು ಸಹೋದರರ ಕತ್ತು ಸೀಳಿ ಹತ್ಯೆ ಮಾಡಿದ್ದು, ಮೂರನೇ ಬಾಲಕನನ್ನು ಗಾಯಗೊಳಿಸಿದ್ದಾನೆ.
ಆರೋಪಿಯನ್ನು ಸಾಜಿದ್(22) ಎಂದು ಗುರುತಿಸಲಾಗಿದ್ದು, ಇಬ್ಬರು ಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಯುಪಿ ಪೊಲೀಸರು ಶೋಧ ಕಾರ್ಯಾಚರಣೆ ಬಳಿಕ ನಡೆಸಿದ ಎನ್ ಕೌಂಟರ್ ನಲ್ಲಿ ಸಾಜಿದ್ ಬಲಿಯಾಗಿದ್ದಾನೆ.
ಸ್ಥಳೀಯರ ಪ್ರಕಾರ, ಆರೋಪಿಯು ತನ್ನ ನೆರೆಯ ವಿನೋದ್ ಕುಮಾರ್ ಕುಟುಂಬದೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ, ವಿನೋದ್ ಅವರು ಸಲೂನ್ ನಡೆಸುತ್ತಿದ್ದಾರೆ. ಸಾಜಿದ್ ಮನೆ ಪ್ರವೇಶಿಸಿದಾಗ ಪಾರ್ಲರ್ ನಡೆಸುತ್ತಿರುವ ವಿನೋದ್ ಕುಮಾರ್ ಅವರ ಪತ್ನಿ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಒಬ್ಬರೇ ಇದ್ದರು.
ವಿನೋದ್ ಅವರ ಮನೆಗೆ ಬಂದ ಆರೋಪಿ ಮಕ್ಕಳಾದ ಆಯುಷ್, ಪಿಯೂಷ್ ಮತ್ತು ಹನಿ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾನೆ. ಮಕ್ಕಳ ತಾಯಿ ಪಾರ್ಲರ್‌ನಲ್ಲಿ ಕೆಳಗಡೆ ಇದ್ದರು. ಕಿರುಚಾಟ ಕೇಳಿದ ಜನರು ಮೇಲಕ್ಕೆ ಧಾವಿಸಿ ಬಂದಿದ್ದು, ಆದರೆ ಈ ವೇಳೆಗೆ ಆರೋಪಿ ಪರಾರಿಯಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಆಕ್ರೋಶಗೊಂಡ ಸ್ಥಳೀಯರು ಶವಗಳನ್ನು ತೆಗೆದುಕೊಳ್ಳಲು ಬಿಡಲಿಲ್ಲ. ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಆಂಬ್ಯುಲೆನ್ಸ್ ಅನ್ನು ಸಂಬಂಧಿಕರು ವಾಪಸ್ ಕಳುಹಿಸಿದ್ದಾರೆ.
ಬಳಿಕ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬುಡೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಮಾತನಾಡಿ, ಪೊಲೀಸರು ಅಪರಾಧ ಮತ್ತು ನಂತರದ ಬೆಳವಣಿಗೆ, ನಿವಾಸಿಗಳ ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದರು.
ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಆರೋಪಿಗೆ 25-30 ವರ್ಷ ಎಂದು ಬರೇಲಿ ಇನ್ಸ್ ಪೆಕ್ಟರ್ ಜನರಲ್ ರಾಕೇಶ್ ಕುಮಾರ್ ಹೇಳಿದ್ದಾರೆ.
ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ. ಶಾಂತಿ ಕಾಪಾಡುವಂತೆ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.