ರಾಣಿ ಎಲಿಜ಼ಬೆತ್ IIಗೆ ಸಾಮಂತನಾಗಿರುವುದನ್ನು ಅಧಿಕೃತವಾಗಿ ನಿಲ್ಲಿಸಿದ ಬಾರ್ಬಡೋಸ್ ತನ್ನ ಮೊದಲನೇ ಗಣತಂತ್ರೋತ್ಸವ ಆಚರಿಸಿದೆ. ಇದೇ ವೇಳೆ ತನ್ನದೇ ನೆಲದ ಪುತ್ರಿಯಾದ ಪಾಪ್ ತಾರೆ ರಿಯಾನ್ನಾರನ್ನು ’ರಾಷ್ಟ್ರೀಯ ಹೀರೋ’ ಎಂದು ಬಾರ್ಬಡೋಸ್ ಸರ್ಕಾರ ಘೋಷಿಸಿದೆ.
ರಾಜಧಾನಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭವೊಂದರ ವೇಳೆ, ತನ್ನ ವಸಾಹತುಶಾಹಿ ಇತಿಹಾಸದ ಛಾಯೆಯಿಂದ ಸಂಪೂರ್ಣ ಹೊರಬರುವ ಹೆಜ್ಜೆ ಇಟ್ಟ ಬಾರ್ಬಡೋಸ್ ತನ್ನನ್ನು ತಾನು ಗಣರಾಜ್ಯವೆಂದು ಘೋಷಿಸಿಕೊಂಡಿದೆ.
ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್ ಎಷ್ಟು ಪರಿಣಾಮಕಾರಿ…? ಪೂನಾವಾಲಾ ವಿವರಣೆ
33 ವರ್ಷ ವಯಸ್ಸಿನ ಪಾಪ್ ಗಾಯಕಿಯನ್ನು ರಾಷ್ಟ್ರೀಯ ಗಾಯಕಿ ಎಂದು ಬಾರ್ಬಡೋಸ್ ಪ್ರಧಾನ ಮಂತ್ರಿ ಮಿಯಾ ಮೊಟ್ಲೇ ಘೋಷಿಸಿದ್ದಾರೆ.
“ನೀವು ವಜ್ರದಂತೆ ಮಿನುಗುತ್ತಾ ನಿಮ್ಮ ಕೆಲಸ ಹಾಗೂ ಕ್ರಿಯೆಗಳ ಮೂಲಕ ನಿಮ್ಮ ದೇಶಕ್ಕೆ ಕೀರ್ತಿ ತರುವುದು ಹೀಗೇ ಮುಂದುವರೆಯಲಿ,” ಎಂದು 2012ರ ಸೂಪರ್‌ಹಿಟ್ ಆಲ್ಬಂ ’ಡೈಮಂಡ್ಸ್’ನ ಉಲ್ಲೇಖದೊಂದಿಗೆ ರಿಯಾನಾರನ್ನು ಪ್ರಧಾನಿ ಅಭಿನಂದಿಸಿದ್ದಾರೆ.
ಬ್ರಿಟನ್‌ನ ಯುವರಾಜ ಚಾರ್ಲ್ಸ್ ಸಹ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಜನಪ್ರಿಯನಾಗಿದ್ದ ಬ್ರಿಟನ್ ಲಾರ್ಡ್ ಒಬ್ಬರ ಪ್ರತಿಮೆಯೊಂದನ್ನು ಕಳೆದ ವರ್ಷ ತೆರವುಗೊಳಿಸುವ ಮೂಲಕ ವಸಾಹತು ಛಾಯೆಯಿಂದ ಹೊರಬರುವ ಕೆಲಸ ಮಾಡಿದ್ದ ಜನಪ್ರಿಯ ಚೌಕವೊಂದರ ಬಳಿಯಲ್ಲೇ ಗಣತಂತ್ರೋತ್ಸವದ ಸಮಾರಂಭ ಆಯೋಜಿಸಲಾಗಿತ್ತು. ದ್ವೀಪದಾದ್ಯಂತ ದೊಡ್ಡ ಸ್ಕ್ರೀನ್‌ಗಳ ಮೇಲೆ ಗಣತಂತ್ರೋತ್ಸವದ ಸಮಾರಂಭವನ್ನು ಬಿತ್ತರಿಸಲಾಗಿತ್ತು.