ಶಿವಮೊಗ್ಗ: ಸಮಯ ಮುಗಿದ ನಂತರ ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಹತ್ಯೆ ಮಾಡಿದ ಘಟನೆ ಆಯನೂರಿನಲ್ಲಿ ನಡೆದಿದೆ.
ಸಚಿನ್(27) ಕೊಲೆಯಾದ ಬಾರ್ ಕ್ಯಾಶಿಯರ್ ಎಂದು ಹೇಳಲಾಗಿದೆ. ಬಾರ್ ಸಮಯ ಮುಗಿದ ನಂತರ ಗಾಂಜಾ ಅಮಲಿನಲ್ಲಿ ಬಂದಿದ್ದ ಮೂವರು ಮದ್ಯ ಕೇಳಿದ್ದಾರೆ. ಈ ವೇಳೆ ಸಚಿನ್ ಅವರು ಸಮಯ ಮುಗಿದಿದೆ. ಮದ್ಯ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಮೂವರು ಗಲಾಟೆ ಮಾಡಿ ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸಮೀಪದಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆಯೂ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಅವರನ್ನು ಸ್ಥಳೀಯರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಮೃತಪಟ್ಟಿದ್ದಾರೆ. ಕುಂಸಿ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.