ಬೆಂಗಳೂರು: ಪದವಿ ಪ್ರಮಾಣ ಪತ್ರ ಪ್ರಶ್ನಿಸುವ ಹಕ್ಕು ವಕೀಲರ ಪರಿಷತ್ ಗೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪದವಿ ಪ್ರಮಾಣ ಪತ್ರ ಪಡೆಯಲು ಹೊಂದಿದ ಅರ್ಹತೆ ಪ್ರಶ್ನಿಸುವ ಅಧಿಕಾರ ವಕೀಲರ ಪರಿಷತ್ ಗೆ ಇಲ್ಲವೆಂದು ಹೈಕೋರ್ಟ್ ಹೇಳಿದೆ. ತರಗತಿಗಳಿಗೆ ಹಾಜರಾಗದ ದಾಖಲೆಗಳನ್ನು ತೋರಿಸದ ಕಾರಣಕ್ಕೆ ಅರ್ಜಿದಾರನ ವಕೀಲಿಕೆ ಸನ್ನದು ನೋಂದಣಿಗೆ ನಿರಾಕರಿಸಿದ ವಕೀಲರ ಪರಿಷತ್ ಕ್ರಮವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ತಮ್ಮ ವಕೀಲಿಕೆ ಸನ್ನದು ನೋಂದಣಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಬೀದರ್ ಸಿವಿಲ್ ನ್ಯಾಯಾಲಯದ ಮಾಜಿ ಸಹಾಯಕ ರಿಜಿಸ್ಟ್ರಾರ್ ಶೆಲ್ಹಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ಏಕ ಸದಸ್ಯ ಪೀಠ ಪರಿಶೀಲಿಸಿದೆ. ಅರ್ಜಿದಾರರಿಗೆ ವಿಶ್ವವಿದ್ಯಾಲಯವು ತಾತ್ಕಾಲಿಕ ಪದವಿ ಮತ್ತು ಘಟಿಕೋತ್ಸವ ಪ್ರಮಾಣ ಪತ್ರ ನೀಡಿರುವುದರಿಂದ ಅವರ ಅರ್ಹತೆಯನ್ನು ಊಹಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿ ಅನರ್ಹರು ಎನ್ನುವ ಕುರಿತು ಸೂಕ್ತ ಪ್ರಾಧಿಕಾರ ತೀರ್ಮಾನಿಸಬೇಕು. ಅದು ಪ್ರಮಾಣ ಪತ್ರವನ್ನು ರದ್ದುಗೊಳಿಸದ ಹೊರತು ಅದನ್ನು ಪ್ರಶ್ನಿಸುವ ಅಧಿಕಾರ ಯಾವುದೇ ಪ್ರಾಧಿಕಾರಕ್ಕೆ ಇಲ್ಲ ಎಂದು ನ್ಯಾಯ ಪೀಠ ಆದೇಶಿಸಿದೆ.
ಬೀದರ್ ಸಿವಿಲ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ನೇಮಕಗೊಂಡಿದ್ದ ಅರ್ಜಿದಾರರು ನಂತರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಅನುಮತಿ ಪಡೆದು ಎಲ್.ಎಲ್.ಬಿ. ಕೋರ್ಸ್ ಸೇರಿದ್ದರು. ಅವರು 200ರಲ್ಲಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಿಗೆ ಕಲಬುರ್ಗಿ ವಿವಿ ಪದವಿ ಮತ್ತು ಘಟಕೋತ್ಸವ ಪ್ರಮಾಣ ಪತ್ರ ಪ್ರದಾನ ಮಾಡಿದೆ. 2018ರಲ್ಲಿ ನಿವೃತ್ತರಾದ ಬಳಿಕ ಅವರು ವಕೀಲರಾಗಿ ನೋಂದಾಯಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸಂಪರ್ಕಿಸಿದ್ದು, ಅವರು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ವಕೀಲರ ಪರಿಷತ್ ತಿರಸ್ಕರಿಸಿತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.