ಬೆಂಗಳೂರು: ಬಾರ್ ನಲ್ಲಿ ಕುಡಿದ ಮತ್ತಿನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವೀನ್(35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಲ್ಕೆರೆಯ ನೈಟ್ ಸಫಾರಿ ಬಾರ್ ನಲ್ಲಿ ನವೀನ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಸಂಜೆ ಬಾರ್ ಗೆ ಮದ್ಯ ಸೇವಿಸಲು ನವೀನ್ ಹೋಗಿದ್ದ. ಇದೇ ವೇಳೆ ಪಕ್ಕದ ಟೇಬಲ್ ನಲ್ಲಿ ಆರೋಪಿಗಳು ಕುಳಿತುಕೊಂಡಿದ್ದರು. ಯಾಕೋ ಗುರಾಯಿಸುತ್ತೀಯಾ ಎಂದು ಬಿಯರ್ ಬಾಟಲಿನಿಂದ ದುಷ್ಕರ್ಮಿಗಳು ನವೀನ್ ತಲೆ ಮೇಲೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡು ನವೀನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.