ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾಲು ಸಾಲು ಪ್ರಾಣಿಗಳು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾರಣಾಂತಿಕ ವೈರಸ್ ಗೆ 7 ಚಿರತೆ ಮರಿಗಳು ಬಲಿಯಾಗಿದ್ದವು. ಈ ಘಟನೆ ಬೆನ್ನಲ್ಲೇ ಇದೀಗ 13 ಜಿಂಕೆಗಳು ಸಾವನ್ನಪ್ಪಿವೆ.
ತಿಂಗಳ ಹಿಂದಷ್ಟೇ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆ ಉದ್ಯಾನದಲ್ಲಿದ್ದ 37 ಜಿಂಕೆಗಳನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ತರಲಾಗಿತ್ತು. ಇವುಗಳಲ್ಲಿ ಹಲವು ಕಾರಣಗಳಿಂದ 13 ಜಿಂಕೆಗಳು ಮೃತಪಟ್ಟಿವೆ.
ಜಿಂಕೆಗಳನ್ನು ಹತ್ತು ದಿನದ ಕ್ವಾರಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದಾಗಿ ಹಾಗೂ ಕೆಲ ಜಿಂಕೆಗಳು ಹೃದಯಾಘಾತದಿಂದಾಗಿ ಮೃತಪಟ್ಟಿವೆ. ಒಟ್ಟು 13 ಜಿಂಕೆಗಳು ನಾನಾ ಕಾರಣಗಳಿಂದ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಉದ್ಯಾನವನದಲ್ಲಿ ಮಾರಣಾಂತಿಕ ವೈರಸ್ ಫೆಲೈನ್ ಪ್ಯಾನ್ ಲ್ಯುಕೋಪೆನಿಯಾ ದಿಂದಾಗಿ 7 ಚಿರತೆ ಮರಿಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಉದ್ಯಾನವನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಜಿಂಕೆಗಳು ಸಾವನ್ನಪ್ಪಿದ್ದು, ಉದ್ಯಾನವನದಲ್ಲಿ ಸೂತಕದ ಛಾಯೆ ಆವರಿಸಿದೆ.