ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ನಿಂದ 7 ಚಿರತೆ ಮರಿಗಳು ಸಾವನ್ನಪ್ಪಿವೆ. ಸೋಂಕು ಉಲ್ಬಣಗೊಂಡು ಚಿರತೆ ಮರಿಗಳು ಮೃತಪಟ್ಟಿರುವುದಾಗಿ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದ್ದಾರೆ.
ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ಬೆಕ್ಕುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾಗಿದೆ. ಆಗಸ್ಟ್ 22ರಂದು ಉದ್ಯಾನವನದ ಚಿರತೆ ಮರಿಗಳಲ್ಲಿ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡು, 3-10 ತಿಂಗಳ ಒಳಗಿನ 7 ಚಿರತೆ ಮರಿಗಳು ಸಾವನ್ನಪ್ಪಿವೆ.
ಈ ಸೋಂಕು ತಗುಲಿದ ಬಳಿಕ ಜೀರ್ಣಕ್ರಿಯೆ ನಿಂತು ಹೋಗಿ, ಬಿಳಿ ರಕ್ತಕಣಗಳು ಕಡಿಮೆಯಾಗುತ್ತವೆ. ರಕ್ತವಾಂತಿ, ಬೇದಿಯಾಗುತ್ತದೆ. ಬಳಿಕ ಒಂದೆರಡು ದಿನಗಳಲ್ಲಿ ನಿತ್ರಾಣಗೊಂಡು ಚಿರತೆಗಳು ಸಾವನ್ನಪ್ಪುತ್ತವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಿಳಿಗಿರಿ ರಂಗನಬೆಟ್ಟ, ಮೈಸೂರು ಉದ್ಯಾನವನಗಳಿಂದ 11 ಚಿರತೆ ಮರಿಗಳನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ತರಲಾಗಿತ್ತು. ಇವುಗಳನ್ನು ಪುನರ್ವಸತಿ ಕೇಂದ್ರದಲ್ಲಿರಿಸಿ ಪ್ರಾಣಿ ಪಾಲಕರು ಆರೈಕೆ ಮಾಡುತ್ತಿದ್ದರು. ಮಾರಣಾಂತಿಕ ವೈರಸ್ ಗೆ ಆಗಸ್ಟ್ 22ರಿಂದ ಸೆ.5ರ ಅವಧಿಯಲ್ಲಿ 7 ಚಿರತೆ ಮರಿಗಳು ಸಾವನ್ನಪ್ಪಿವೆ.
ಈ ವೈರಸ್ ಇನ್ನೂ 11 ಪ್ರಾಣಿಗಳಿಗೆ ಹರಡಿದೆ. ಅವುಗಳಲ್ಲಿ 8 ತಿಂಗಳ ಸಿಂಹದ ಮರಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದೆ. ಇನ್ನು ಸೋಂಕಿತ ಪ್ರಾಣಿಗಳೊಂದಿಗೆ ಒಡನಾಟವಿರುವ ಪ್ರಾಣಿಪಾಲಕರನ್ನು ಬೇರೆಡೆ ತೆರಳದಂತೆ ಸೂಚಿಸಲಾಗಿದೆ. ಇತರೆ ಪ್ರಾಣಿಗಳು ಸೋಂಕಿಗೆ ಒಳಗಾಗದಂತೆ ಮುನೆಚ್ಚರಿಕೆ ವಹಿಸಲು ತಿಳಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.