ಬೆಂಗಳೂರು: ಜಿಂಕೆಯನ್ನು ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬನ್ನೇರುಘಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಜಿಗಣಿ ಹೋಬಳಿ ಗೋಣಿನಾಯಕನದೊಡ್ಡಿಯ ಸಂತೋಷ್(40) ಬಂಧಿತ ಆರೋಪಿ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಸವನಕುಂಟೆಯ ಮನೆಯೊಂದರಲ್ಲಿ ಜಿಂಕೆ ಮಾಂಸದ ಸಹಿತ ಆರೋಪಿಯನ್ನು ಬಂಧಿಸಲಾಗಿದೆ ಭಾನುವಾರ ಮುಂಜಾನೆ ಮನೆಯೊಂದರಲ್ಲಿ ಜಿಂಕೆ ಮಾಂಸ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಬನ್ನೇರುಘಟ್ಟ ವಲಯದ ಆರ್.ಎಫ್.ಒ. ಶಂಕರ್ ಅಂತರಘಟ್ಟಿ ಮತ್ತು ಡಿ.ಆರ್.ಎಫ್. ಹೇಮಂತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಆರೋಪಿ ಮನೆಯಲ್ಲಿ ಜಿಂಕೆ ಮಾಂಸ, ಬಂದೂಕು, ಜಿಂಕೆ ಕೊಂಬು, ತೂಕ ಮಾಪಕ, ಬಲೆ, ಪಂಜರ, ವೈರ್, ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಮಹದೇವ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.